ICUವಿನಿಂದ ಸೆಮಿಫೈನಲ್ ಆಡಲು ಬಂದಿದ್ದ ರಿಝ್ವಾನ್..!

Prasthutha|

ದುಬೈ: ಕ್ರೀಡಾ ತಾರೆಯರು ತಮ್ಮ ದೇಶಕ್ಕಾಗಿ ಎಷ್ಟರ ಮಟ್ಟಿಗೆ ತಮ್ಮನ್ನು ಸಮರ್ಪಿಸಿಕೊಂಡಿರುತ್ತಾರೆ ಎಂಬುದಕ್ಕೆ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯ ಸಾಕ್ಷಿಯಾಗಿದೆ. ಪಾಕಿಸ್ತಾನದ ಮುಹಮ್ಮದ್ ರಿಝ್ವಾನ್, ಹೃದಯ ಸೋಂಕು ಹಾಗೂ ತೀವ್ರ ಜ್ವರದ ಕಾರಣ ICUಯುವಿನಲ್ಲಿ ದಾಖಲಾಗಿದ್ದರೂ ಮಹತ್ವದ ಪಂದ್ಯದಲ್ಲಿ ತನ್ನ ಜವಾಬ್ದಾರಿಯನ್ನು ಅರಿತು ತಂಡವನ್ನು ಸೇರಿಕೊಂಡಿದ್ದರು.

- Advertisement -

ಪಾಕಿಸ್ತಾನದ ತಂಡದ ವೈದ್ಯರಾದ ನಜೀಬ್ ಸೂಮ್ರೊ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. “ನವೆಂಬರ್ 9ರಂದು ಮುಹಮ್ಮದ್ ರಿಝ್ವಾನ್’ಗೆ ತೀವ್ರ ಹೃದಯ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ರಾತ್ರಿಗಳನ್ನು ICUವಿನಲ್ಲಿ ಕಳೆದಿದ್ದ ಮುಹಮ್ಮದ್ ರಿಝ್ವಾನ್, ನೋವು ಪೂರ್ಣವಾಗಿ ವಾಸಿಯಾಗದಿದ್ದರೂ ತನ್ನ ಜವಾಬ್ದಾರಿಯನ್ನ ಅರಿತು ತಂಡದ ಜೊತೆಯಾಗಿದ್ದರು” ಎಂದು ಹೇಳಿದ್ದಾರೆ.

ಮುಹಮ್ಮದ್ ರಿಝ್ವಾನ್ ಬದ್ಧತೆಗೆ ಕ್ರಿಕೆಟ್ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಟೀಮ್ ಇಂಡಿಯಾದ ಮಾಜಿ ಆಟಗಾರ ವಿವಿಎಸ್ ಲಕ್ಷಣ್ ಟ್ವೀಟ್ ಮಾಡಿ, ಧೈರ್ಯ, ಬದ್ಧತೆ ಹಾಗೂ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಇದೊಂದು ಶ್ರೇಷ್ಠವಾದ ಉದಾಹರಣೆ. ತಂಡವು ಸೋಲಿಗೆ ಶರಣಾಗಿರಬಹುದು, ಆದರೆ ಮುಹಮ್ಮದ್ ರಿಝ್ವಾನ್ ತೋರಿದ ಹೋರಾಟ ಮನೋಭಾವವು ನಿಜವಾಗಿಯೂ ಸ್ಪೂರ್ತಿಧಾಯಕವಾಗಿದೆ. ಕ್ರೀಡೆಯು ಕಲಿಯಲು ಶ್ರೇಷ್ಠ ವೇದಿಕೆಯಾಗಿದ್ದು, ಇಲ್ಲಿ ಎಲ್ಲರಿಂದಲೂ ಕಲಿಯಬೇಕಾಗಿರುವುದು ಬಹಳಷ್ಟಿದೆ ಎಂದು ರಿಝ್ವಾನ್’ರನ್ನು ಪ್ರಶಂಸಿದ್ದಾರೆ.

- Advertisement -

ನೋವಿನ ನಡುವೆಯೂ ಅದ್ಭುತ ಇನ್ನಿಂಗ್ಸ್ ಆಡಿದ್ದ ಮುಹಮ್ಮದ್ ರಿಝ್ವಾನ್, 52 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 67 ರನ್’ಗಳಿಸಿ 18ನೇ ಓವರ್’ನಲ್ಲಿ ಸ್ಟಾರ್ಕ್’ಗೆ ವಿಕೆಟ್ ಒಪ್ಪಿಸಿದ್ದರು.

ಮುಹಮ್ಮದ್ ರಿಝ್ವಾನ್ ಹಾಗೂ ಆಲ್’ರೌಂಡರ್ ಶುಹೈಬ್ ಮಲಿಕ್ ತೀವ್ರ ಜ್ವರದಿಂದ ಬಳಲುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿಯುವುದಿಲ್ಲ ಎಂದು ಬಹುತೇಕ ಮಾಧ್ಯಮಗಳು ಪಂದಕ್ಕೂಮೊದಲು ವರದಿ ಮಾಡಿದ್ದವು. ಆದರೆ ಟೂರ್ನಿಯಲ್ಲಿ ಮೊದಲನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದ ಪಾಕಿಸ್ತಾನ, ಸೆಮಿಫೈನಲ್’ನಲ್ಲೂ ಅದೇ ತಂಡದೊಂದಿಗೆ ಆಡಿತ್ತು.

ಮತ್ತೊಂದೆಡೆ ಐಪಿಎಲ್’ನಲ್ಲಿ ಅಬ್ಬರಿಸುವ ಭಾರತೀಯ ಆಟಗಾರರು ಐಸಿಸಿ ಟೂರ್ನಿಗಳಲ್ಲಿ ಮಂಕಾಗುತ್ತಾರೆ ಎಂಬ ಆರೋಪ ಈ ಬಾರಿಯ ಟಿ-20 ವಿಶ್ವಕಪ್ ಬಳಿಕ ವ್ಯಾಪಕವಾಗಿ ಕೇಳಿಬಂದಿತ್ತು. ಕಪಿಲ್ ದೇವ್ ಸೇರಿದಂತೆ ಹಲವು ಮಾಜಿ ಆಟಗಾರರು ಈ ಕುರಿತು ಮುಕ್ತವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Join Whatsapp