ಬೆಂಗಳೂರು: ಇತ್ತೀಚೆಗೆ ಸುರತ್ಕಲ್ ಜಂಕ್ಷನ್’ನಲ್ಲಿ ನಡೆದ ಫಾಝಿಲ್ ಮಂಗಳಪೇಟೆ ಅವರ ಹತ್ಯೆಗೆ ಸಂಬಂಧಿಸಿದಂತೆ ಅಮಾಯಕ ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ, ಕುಟುಂಬಸ್ಥರಲ್ಲಿ ಭಯದ ವಾತಾವರಣ ನಿರ್ಮಿಸಿದರೆ ಮಂಗಳೂರು ಕಮಿಷನರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸ್ಥಳೀಯ ಶಾಸಕ ಭರತ್ ಶೆಟ್ಟಿ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಶಾಸಕರೆಂಬ ಜವಾಬ್ದಾರಿಯನ್ನು ಮರೆತು, ಇಂತಹ ಹೇಳಿಕೆ ನೀಡುವ ಮೂಲಕ ಬಿಜೆಪಿ ಕಾರ್ಯಕರ್ತರು ಶಾಮೀಲಾಗಿದ್ದರೆ ಕಾನೂನು ಕ್ರಮ ಜರುಗಿಸಬಾರದು ಎಂದು ಶಾಸಕರು ಆದೇಶಿಸುತ್ತಿದ್ದಾರೆಯೇ ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ.
ಡೆಕ್ಕನ್ ಹೆರಾಲ್ಡ್ ಪತ್ರಿಕೆ ಮಾಡಿದ ವರದಿಯ ತುಣುಕನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಶಾಸಕ ಭರತ್ ಶೆಟ್ಟಿ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದೆ.
ಬಿಜೆಪಿ ಶಾಸಕರ ಬೆದರಿಕೆಯು ಪಕ್ಷದ ಕಾರ್ಯಕರ್ತರನ್ನು ಕಾನೂನನ್ನು ಕೈ ತೆಗೆದುಕೊಳ್ಳುವಂತೆ ಪ್ರೇರೇಪಿಸಿವೆ ಮತ್ತು ಪೊಲೀಸರನ್ನು ಹತಾಶರನ್ನಾಗಿಸಿದೆ. ಇದು ಉತ್ತರ ಪ್ರದೇಶ ಮಾದರಿಯೇ ? ಎಂದು ಕಾಂಗ್ರೆಸ್ ಟ್ವೀಟ್’ನಲ್ಲಿ ಪ್ರಶ್ನಿಸಿದೆ.
ಫಾಝಿಲ್ ಹತ್ಯೆಯಲ್ಲಿ ಭಾಗಿಯಾದ ನೈಜ ಆರೋಪಿಗಳನ್ನು ಬಂಧಿಸುವುದನ್ನು ಬಿಟ್ಟು ತನಿಖೆಯ ನೆಪದಲ್ಲಿ ಅಮಾಯಕ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಶಾಸಕ ಭರತ್ ಶೆಟ್ಟಿ ಇತ್ತೀಚೆಗೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಆರೋಪಿಗಳನ್ನು ಬಂಧಿಸಿವುದು ನಮ್ಮ ಆಧ್ಯ ಕರ್ತವ್ಯ. ಆರೋಪಿಗಳು ಯಾವುದಾದರೂ ಸಂಘಟನೆಗೆ ಸೇರಿದ್ದಾರ ಎಂದೆಲ್ಲಾ ನಾವು ನೋಡುವುದಿಲ್ಲ ಎಂದು ತಿಳಿಸಿದ್ದರು.