ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಳೆದ 10 ದಿನಗಳಲ್ಲಿ ಮೂವರು ಯುವಕರ ಹತ್ಯೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ದ್ವೇಷ ಹರಡುವ ಪ್ರಚೋದನಾಕಾರಿ ಮೆಸೇಜುಗಳನ್ನು ರವಾನಿಸಿದ್ದು, ಇದರ ವಿರುದ್ಧ ಪೊಲೀಸ್ ಕಮಿಷನರೇಟ್’ನ ಐಟಿ ಸೆಲ್ ಅಧಿಕಾರಿಗಳು ಐದು ಪ್ರಕರಣ ದಾಖಲಿಸಿದ್ದಾರೆ.
ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಅಭಿಪ್ರಾಯಗಳನ್ನು ಶೇರ್ ಮಾಡುತ್ತಿದ್ದರೆ, ಮತ್ತೆ ಪ್ರಚೋದನಾಕಾರಿ ಮೆಸೇಜ್’ಗಳನ್ನು ವೈರಲ್ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡ ಇಲಾಖೆ ಇಂತಹವರ ಮೇಲೆ ಸೂಕ್ಷ್ಮವಾಗಿ ಕಣ್ಣಿಟ್ಟಿತ್ತು ಎಂದು ಹೇಳಲಾಗಿದೆ.
ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾದ ಐದು ಆಕ್ಷೇಪಾರ್ಹ ಮೆಸೇಜುಗಳನ್ನು ಕಂಡಹಿಡಿದಿರುವ ಪೊಲೀಸ್ ಇಲಾಖೆ, ಸೈಬರ್, ಆರ್ಥಿಕ ಮತ್ತು ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪರಾಧಗಳ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 ಎ, 505 (2) ಮತ್ತು ಐಟಿ ಕಾಯ್ದೆ 66ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.