ನವದೆಹಲಿ: ಜೂನ್ 21 ರ ಅಂತರಾಷ್ಟ್ರೀಯ ಯೋಗ ದಿನದಿಂದ 18 ವರುಷ ಮೇಲ್ಪಟ್ಟ ದೇಶದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ನೀಡುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಕೋವಿಡ್ ಎರಡನೇ ಅಲೆ ಜೊತೆ ನಾವು ಹೋರಾಡುತ್ತಿದ್ದೇವೆ. ಕಳೆದ 100 ವರುಷಗಳಲ್ಲಿ ಇಂತಹ ಮಹಾಮಾರಿ ರೋಗವನ್ನ ಇದುವರೆಗೂ ನಾವು ಕಂಡಿರಲಿಲ್ಲ. ಕೊರೊನಾದಿಂದಾಗಿ ನಮ್ಮ ಜೊತೆಗಿನ ಹಲವರನ್ನ ಕಳೆದುಕೊಂಡಿದ್ದೇವೆ. ಕುಟುಂಬಿಕರನ್ನ ಕಳೆದುಕೊಂಡವರಿಗೆ ನನ್ನ ಸಂವೇದನೆ ಇದೆ ಎಂದರು.
ಕೋವಿಡ್ ವಿರುದ್ಧ ಹೋರಾಟ ಮಾಡುವಲ್ಲಿ ಹೊಸ ಆರೋಗ್ಯ ವ್ಯವಸ್ಥೆ ಆರಂಭಿಸಿದ್ದೇವೆ. ಸೋಂಕಿನ ವಿರುದ್ಧ ರೈಲ್ವೇ, ನೌಕಾ, ವಾಯು ಸೇನೆ ಸಹಿತ ಯುದ್ದೋಪಾದಿಯಲ್ಲಿ ಕೆಲಸ ನಡೆದಿದೆ. ಆಧುನಿಕ ಜಗತ್ತು ಇಂತಹ ಸಂಕಷ್ಟ ಅನುಭವಿಸಿರಲಿಲ್ಲ. ವಿಶ್ವದಲ್ಲಿ ಲಸಿಕೆಗಾಗಿ ಸಾಕಷ್ಟು ಬೇಡಿಕೆ ಇದೆ. ಆದರೆ ಬೇಡಿಕೆ ಪೂರೈಸುವಷ್ಟು ಲಸಿಕೆ ಸಿಗುತ್ತಿಲ್ಲ. ಈ ಹಿಂದೆ ದೇಶದಲ್ಲಿ ಪೋಲಿಯೋ ಲಸಿಕೆ ಸಹಿತ ಹಲವು ಸೋಂಕಿನ ವಿರುದ್ಧದ ಲಸಿಕೆಗಾಗಿ ದೇಶದ ಜನರು ದಶಕಗಳ ಕಾಲ ಕಾದಿದ್ದೂ ನೆನಪಿರಬಹುದು. ಆದರೆ ಕೊರೊನಾ ಸಮಯದಲ್ಲಿ ಇಂದು ಶೇಕಡಾ 60 ರಷ್ಟು ಮಂದಿಗೆ ಲಸಿಕೆ ವಿತರಿಸಲಾಗಿದೆ. ಮುಂದಿನ ಹಂತದಲ್ಲಿ ಅದು ಶೇಕಡಾ 70 ರಿಂದ 90 ರಷ್ಟಕ್ಕೆ ಏರಿಕೆ ಆಗಲಿದೆ ಎಂದರು.
ದೇಶದ ವಿಜ್ಞಾನಿಗಳು ಕಡಿಮೆ ಅವಧಿಯಲ್ಲಿ ಲಸಿಕೆ ಕಂಡು ಹಿಡಿಯುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ. ಕಳೆದ ವರುಷದ ಎಪ್ರಿಲ್ ನಲ್ಲಿ ಲಸಿಕೆ ತಯಾರಿಕೆ ಬೇಕಾದ ಸಹಕಾರ ನೀಡಲು ಸರಕಾರ ನಿರ್ಧರಿಸಿತ್ತು. ಆತ್ಮ ನಿರ್ಭರ ಯೋಜನೆಯಡಿ ಅನುದಾನ ನೀಡಲಾಗಿತ್ತು. ಭುಜಕ್ಕೆ ಭುಜ ನೀಡಿ ಅವರ ಸಂಶೋಧನೆಗೆ ಸರಕಾರ ಸಹಕಾರಿಯಾಗಿತ್ತು. ಹೀಗಾಗಿ ಕಡಿಮೆ ಅವಧಿಯಲ್ಲಿ ಭಾರತದಲ್ಲೇ ಲಸಿಕೆ ಉತ್ಪಾದನೆ ಆಗಿವೆ. ಇನ್ನೂ ಮೂರು ಕಂಪೆನಿಗಳ ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿದೆ. ಮೂಗಿನ ಮೂಲಕ ನೀಡುವ ಲಸಿಕೆಯೂ ಪ್ರಾಯೋಗಿಕ ಹಂತದಲ್ಲಿದೆ. ಅದರಲ್ಲಿ ಏನಾದ್ರೂ ಯಶಸ್ಸು ಕಂಡರೆ ಲಸಿಕೆ ನೀಡುವ ಸರಕಾರದ ವೇಗ ಇನ್ನಷ್ಟು ಹೆಚ್ಚಲಿದೆ. ಮುಂದಿನ ಅಲೆಯಲ್ಲಿ ಮಕ್ಕಳಿಗೆ ಸೋಂಕು ಆತಂಕ ಇರುವುದರಿಂದ ಮಕ್ಕಳಿಗೆ ನೀಡುವ ಲಸಿಕೆಗಳ ಪ್ರಯೋಗದಲ್ಲಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ನೀತಿಯನ್ನ ಸೂಚಿಸಿದೆ. ಅದರಂತೆ ದೇಶದಲ್ಲಿ ಲಸಿಕೆ ತಯಾರಿಸಲಾಗಿದೆ. ಸರ್ಕಾರ ಎಲ್ಲರಿಗೂ ಲಸಿಕೆ ನೀಡಲು ಬದ್ಧವಾಗಿದೆ. 23 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ. ಕೇಂದ್ರ ಸರ್ಕಾರವು ಕೊರೊನಾ ಸೋಂಕು ನಿಗ್ರಹಿಸಲು ಯಾವುದೇ ಕ್ರಮಕೈಗೊಳ್ಳಲು ರಾಜ್ಯ ಸರಕಾರಕ್ಕೆ ಮುಕ್ತ ಅವಕಾಶ ನೀಡಿದೆ. ಆದರೆ ಲಸಿಕೆ ಬಗ್ಗೆ ಕೆಲವು ರಾಜ್ಯಗಳು, ಕೆಲವು ಮಾಧ್ಯಮಗಳು ಅಪಸ್ವರ ಎತ್ತಿದ್ದವು. ಆದ್ದರಿಂದ ಶೇಕಡಾ 25 ರಷ್ಟು ಲಸಿಕೆ ವಿತರಣೆಯನ್ನ ಅವರಿಗೆ ನೀಡಲಾಯಿತು. ಹಾಗೆ ಮುಕ್ತ ಅವಕಾಶ ನೀಡಿದ ಪರಿಣಾಮ ರಾಜ್ಯಗಳಿಗೂ ಲಸಿಕೆ ವಿತರಣೆ ಸಮಸ್ಯೆ ಅರ್ಥವಾಯಿತು ಎಂದರು.
ಇನ್ನು ದೇಶದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದು, ಹಾಗೆ ಪಡೆಯುವವರು 150 ರೂ. ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಲಸಿಕೆ ಬಗ್ಗೆ ಆತಂಕ ಮೂಡಿಸಿ ಮುಗ್ಧ ಜನರ ಜೀವದ ಜೊತೆ ಚೆಲ್ಲಾಟವಾಡಿದವರಿದ್ದಾರೆ, ಅಂತಹವರಿಂದ ದೂರವಿರಿ ಎಂದು ಪ್ರಧಾನ ಮಂತ್ರಿಗಳು ಮನವಿ ಮಾಡಿದ್ದಾರೆ.
ಅಲ್ಲದೇ ಮುಂದಿನ ದೀಪಾವಳಿ ವರೆಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಅಕ್ಕಿ ವಿತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.