ಮಿಸ್ ಕೇರಳ ಅನ್ಸಿ ಕಬೀರ್ ಸಾವಿನ ಸುತ್ತ ಅನುಮಾನದ ಹುತ್ತ: ಸಿನಿಮೀಯ ಶೈಲಿಯಲ್ಲಿ ಪೊಲೀಸರ ತನಿಖೆ !

Prasthutha|

ಕೊಚ್ಚಿ: ಅಕ್ಟೋಬರ್ 31ರ ತಡರಾತ್ರಿ ಕೇರಳದ ಕೊಚ್ಚಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ 2019ರ ಮಿಸ್ ಕೇರಳ ಅನ್ಸಿ ಕಬೀರ್ (24) ಹಾಗೂ ಅದೇ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದ ಅಂಜನಾ ಶಾಜನ್ (25) ದಾರುಣವಾಗಿ ಮೃತಪಟ್ಟಿದ್ದರು. ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ವೇಳೆ ರಸ್ತೆ ಬದಿಯಲ್ಲಿದ್ದ ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದರು.

- Advertisement -

ಮೇಲ್ನೋಟಕ್ಕೆ ಇದೊಂದು ಅಪಘಾತವೆಂಬಂತೆ ಕಂಡು ಬಂದರೂ, ಪೊಲೀಸ್ ತನಿಖೆಯ ವೇಳೆ ಹಲವು ಗಂಭೀರ ವಿಷಯಗಳು  ಹೊರಬರುತ್ತಿದೆ. ಅಪಘಾತದಲ್ಲಿ ಅನ್ಸಿ ಕಬೀರ್, ಅಂಜನಾ ಶಾಜನ್ ಮೃತಪಟ್ಟಿದ್ದರು. ಕಾರು ಚಲಾಯಿಸುತ್ತಿದ್ದ ಅಬ್ದುಲ್ ರಹಿಮಾನ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದ. ಅಬ್ದುಲ್ ರಹಿಮಾನ್’ನನ್ನು ತೀವ್ರ ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದೆ.

ಘಟನೆ ನಡೆದ ಅಕ್ಟೋಬರ್ 31ರ ತಡರಾತ್ರಿ ಕೇರಳದ ಕೊಚ್ಚಿಯಲ್ಲಿರುವ NO 18 ಹೊಟೇಲಿನಲ್ಲಿ ಡಿಜೆ ಪಾರ್ಟಿ ಆಯೋಜಿಸಲಾಗಿತ್ತು. ಆದರೆ ಪಾರ್ಟಿಯಲ್ಲಿ ಗಲಾಟೆಯಾದ ಕಾರಣ ಅರ್ಧದಲ್ಲಿಯೇ ಅನ್ಸಿ ಕಬೀರ್, ಅಂಜನಾ ಶಾಜನ್, ಅಬ್ದುಲ್ ರಹಿಮಾನ್ ಹಾಗೂ ಆಶಿಕ್ ಜೊತೆ KL 40 J 3333 ಹ್ಯೂಂಡೈ ಕಾರಿನಲ್ಲಿ ಹೊಟೇಲ್’ನಿಂದ ಹೊರಟಿದ್ದರು. ಈ ವೇಳೆ ಇವರನ್ನು ತಡೆದ ಗುಂಪೊಂದು ಪಾರ್ಟಿ ಮುಗಿದ ಬಳಿಕವಷ್ಟೇ ಹೋಗಬೇಕು ಎಂದು ಬೆದರಿಕೆ ಹಾಕಿದ್ದರು. ಆದರೆ ಅವರ ಮಾತನ್ನ ಕೇಳದೆ ರಹಿಮಾನ್ ಕಾರನ್ನು ಚಲಾಯಿಸಿಕೊಂಡು ಬಂದಿದ್ದ.

- Advertisement -

ಇದರಿಂದ ಕುಪಿತರಾದ  ಹೊಟೇಲ್ ಮಾಲೀಕ ರಾಯ್ ತನ್ನ ಸ್ನೇಹಿತರ ಜೊತೆಗೂಡಿ AUDI  ಕಾರೊಂದರಲ್ಲಿ ಹ್ಯೂಂಡೈ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ. ಕುಂಡನ್ನೂರ್ ಎಂಬಲ್ಲಿ ಅನ್ಸಿ ಕಬೀರ್, ಅಂಜನಾ ಶಾಜನ್ ಸಂಚರಿಸುತ್ತಿದದ ಕಾರನ್ನು ಅಡ್ಡಗಟ್ಟಿ ಹೊಟೇಲ್’ಗೆ ಮರಳುವಂತೆ ರಾಯ್ ಹಾಗೂ ಸ್ನೇಹಿತರು ಧಮ್ಕಿ ಹಾಕಿದ್ದರು. ಆದರೆ ಇವರಿಂದ ತಪ್ಪಿಸಿಕೊಂಡು ವೇಗವಾಗಿ ಬಂದ ಕಾರು ಚಕ್ಕರಪರಂಬು ಎಂಬಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಕಾರು ನುಜ್ಜುಗುಜ್ಜಾಗಿತ್ತು. ಕಾರಿನಲ್ಲಿದ್ದ 2019ರ ಮಿಸ್ ಕೇರಳ ಅನ್ಸಿ ಕಬೀರ್ (24) ಹಾಗೂ ಅದೇ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದ ಅಂಜನಾ ಶಾಜನ್ (25) ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದರು.

ಇದೇ ವೇಳೆ ಹಿಂದಿನಿಂದ ಬರುತ್ತಿದ್ದ AUDI ಕಾರ್’ನಲ್ಲಿದ್ದವರು, ಕಾರ್’ನಿಂದ ಇಳಿದು ಎಲ್ಲವನ್ನೂ ವೀಕ್ಷಿಸಿದ್ದಾರೆ. ಊರವರು ಸೇರತೊಡಗಿದ ಮೇಲೆ ಅಲ್ಲಿಂದ ತೆರಳಿದ್ದಾರೆ. ಬಳಿಕ  ಹ್ಯೂಂಡೈ ಕಾರು ಚಲಾಯಿಸುತ್ತಿದ್ದ ಅಬ್ದುಲ್ ರಹಿಮಾನ್ ಹಾಗೂ ಪಕ್ಕದ ಸೀಟಿನಲ್ಲಿದ್ದ ಆಶಿಕ್ ಬದುಕುಳಿದಿದ್ದಾನೆ ಎಂದು ತಿಳಿದು ಅವರನ್ನು ನೋಡಲು ಹೊಟೇಲ್ ಮಾಲೀಕ ರಾಯ್ ತನ್ನ ಸ್ನೇಹಿತರ ಜೊತೆಗೂಡಿ ಕೊಚ್ಚಿಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೆರಳಿದ್ದಾನೆ ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.



Join Whatsapp