ವಿಧಾನ ಪರಿಷತ್ ಚುನಾವಣೆ: ಮತ್ತೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಿರುವ ದೇವೇಗೌಡ ಕುಟುಂಬ..!?

Prasthutha|

ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಕಾವು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ, ಇಲ್ಲವೆ ಮತ್ತೋರ್ವ ಪುತ್ರ ಸೂರಜ್ ರೇವಣ್ಣ ಅವರು ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ.

- Advertisement -

ಹಾಗೊಂದು ವೇಳೆ ಭವಾನಿ ರೇವಣ್ಣ ಅವರ ಸ್ಪರ್ಧೆಗೆ ಜ್ಯೋತಿಷಿಗಳು ಅನುಮತಿ ನೀಡದಿದ್ದರೆ ಸೂರಜ್ ರೇವಣ್ಣ ಸ್ಪರ್ಧೆ ಖಚಿತವಾಗಿದೆ. ಸೊಸೆ ಮತ್ತು ಮೊಮ್ಮಗನ ಸ್ಪರ್ಧೆಗೆ ದೇವೇಗೌಡರು ಅನುಮತಿ ನೀಡಿಲ್ಲ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಈ ವಿಚಾರವನ್ನು ಗೌಡರ ಹೆಗಲಿಗೆ ಕಟ್ಟಿದ್ದಾರೆ.

ಆದರೆ ರೇವಣ್ಣ ಅವರು ತಮ್ಮ ಪತ್ನಿ ಇಲ್ಲವೆ ಎರಡನೇ ಪುತ್ರನನ್ನು ಹಾಸನ ವಿಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಣಕ್ಕಿಳಿಸಲು ಎಲ್ಲಾ ರೀತಿಯಿಂದಲೂ ತಯಾರಿ ನಡೆಸಿದ್ದಾರೆ. ದೇವೇಗೌಡರು ರಾಜ್ಯಸಭಾ ಸದಸ್ಯರಾಗಿದ್ದು, ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಎಚ್.ಡಿ. ಕುಮಾರ ಸ್ವಾಮಿ, ಪತ್ನಿ ಅನಿತಾ ಕುಮಾರ ಸ್ವಾಮಿ, ಎಚ್.ಡಿ. ರೇವಣ್ಣ ವಿಧಾನಸಭಾ ಸದಸ್ಯರಾಗಿದ್ದಾರೆ. ಇದೀಗ ಮೇಲ್ಮನೆಗೆ ಇವರ ಕುಟುಂಬದಿಂದ ಯಾರೂ ಕಣಕ್ಕಿಳಿದಿಲ್ಲ. ಈ ಕೊರತೆಯನ್ನು ಭವಾನಿ ರೇವಣ್ಣ ಇಲ್ಲವೆ ಸೂರಜ್ ರೇವಣ್ಣ ನೀಗಿಸಲು ಸಜ್ಜಾಗಿದ್ದಾರೆ.

- Advertisement -

ಈ ಬೆಳವಣಿಗೆಗೆ ಬಿಜೆಪಿ ವ್ಯಂಗ್ಯವಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಓಲೈಕೆ ಕುಟುಂಬ ರಾಜಕಾರಣ ಮಣೆ ಹಾಕುತ್ತಿವೆ ಎಂದು ಟ್ವೀಟ್ ಮೂಲಕ ವಾಗ್ದಾಳಿ ಮಾಡಿದೆ.

“ಕುಟುಂಬ ರಾಜಕಾರಣದ ರೆಂಬೆ-ಕೊಂಬೆಗಳು ಎಷ್ಟೊಂದು ಸಮೃದ್ಧವಾಗಿದೆ” ಎಂದು ಬಿಜೆಪಿ ಟ್ವೀಟ್ ಮಾಡಿ ಜೆಡಿಎಸ್ ಗೆ ತಿರುಗೇಟು ಕೊಟ್ಟಿದೆ. ಭವಾನಿ ರೇವಣ್ಣ ಅವರಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂಬ ಬಗ್ಗೆ ಪ್ರಸ್ತಾಪವಾಗಿದೆ. ಕಾರ್ಯಕರ್ತರ ಭಾವನೆಗೆ ಬೆಲೆ ನೀಡಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಒಪ್ಪಿಗೆ ಸೂಚಿಸಿದ್ದಾರೆ. ಇದು ಕುಟುಂಬ ರಾಜಕಾರಣದ ಇನ್ನೊಂದು ಮುಖ ಅನಾವರಣವೇ? ಎಂದು ಪ್ರಶ್ನಿಸಿದ್ದಾರೆ.

Join Whatsapp