ವಿಶ್ವ ಕರ್ಮ ಜಯಂತಿಗೆ ಸಚಿವರು, ಅಧಿಕಾರಿಗಳು ಗೈರು: ವಿಶ್ವ ಕರ್ಮ ಪರಿಷತ್ ತೀವ್ರ ಆಕ್ರೋಶ

Prasthutha|

ಮಂಗಳೂರು: ವಿಶ್ವ ಕರ್ಮ ಜಯಂತಿ ಆಚರಣೆ ಸರ್ಕಾರಿ ಕಾರ್ಯಕ್ರಮವಾಗಿದ್ದು, ಇದರಲ್ಲಿ ಸಚಿವರು ಅಧಿಕಾರಿಗಳು ಗೈರಾಗಿರುವುದಕ್ಕೆ ವಿಶ್ವಕರ್ಮರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸರ್ಕಾರಿ ಕಾರ್ಯಕ್ರಮಕ್ಕೆ ಗೈರಾದ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ ಅಖಿಲ ಭಾರತ ವಿಶ್ವ ಕರ್ಮ ಪರಿಷತ್ ರಾಜ್ಯ ಸಂಚಾಲಕ ಉದಯ ಜಿ ಆಚಾರ್ಯ, 3 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸ್ಥಳೀಯ ಶಾಸಕರನ್ನು ಕಾದು 5 ಗಂಟೆಗೆ ಆರಂಭಿಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ಮನೆ ಬಾಗಿಲಿಗೆ ಅಲೆಯುವ ರಾಜಕಾರಣಿಗಳು ನಮ್ಮ ಕಾರ್ಯಕ್ರಮದ ಬಗ್ಗೆ ಅಸಡ್ಡೆ ತೋರಿಸಿರುವುದು ಒಪ್ಪಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಮ್ಮ ಗಂಟೆಗಟ್ಟಲೆ ಕಾಯಿಸುತ್ತಾರೆ. ಪ್ರಬಲ ಸಮುದಾಯದ ಕಾರ್ಯಕ್ರಮಕ್ಕೆ ಯಾವುದೇ ಪ್ರೋಟೋಕಾಲ್ ಇಲ್ಲದಿದ್ದರೂ ಎಲ್ಲಾ ನಾಯಕರು ಭಾಗಿ ಆಗುತ್ತಾರೆ. ವಿಶ್ವ ಕರ್ಮ ಸಮಾಜಕ್ಕೆ ನಿರ್ಲಕ್ಷ್ಯ ತಾರತಮ್ಯ ಯಾಕೆ…? ಎಂದು ಪ್ರಶ್ನಿಸಿದರು.

- Advertisement -

ದೇಶದಲ್ಲಿ ನೋಟ್ ಬ್ಯಾನ್, ಜಿಎಸ್ ಟಿಯಿಂದ ನಮ್ಮ ಸಮಾಜದ ಜನರಿಗೆ ಹೊಡೆತ ಬಿದ್ದಿದೆ. ಅದೆಷ್ಟೋ ಮಂದಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ನಮ್ಮ ಸಮುದಾಯದ 90 ಕ್ಕೂ ಅಧಿಕ ಅಂಗಡಿಗಳು ಮುಚ್ಚಿವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆತಂಕ ವ್ಯಕ್ತಪಡಿಸಿದರು.

ವಿಶ್ವಕರ್ಮ ಸಮಾಜವನ್ನು ಪ್ರಶಂಸಿಸುವ ಸರ್ಕಾರ, ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶ್ವಕರ್ಮ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡಲಿ ಎಂದು ಉದಯ ಜಿ ಆಚಾರ್ಯ ಆಗ್ರಹಿಸಿದರು.
ಮಂಗಳೂರಿನಲ್ಲಿ ಸೆಪ್ಟೆಂಬರ್ 17ರಂದು ಉಭಯ ಜಿಲ್ಲೆಗಳಲ್ಲಿ ನಡೆದ ಸರ್ಕಾರಿ ಪ್ರಾಯೋಜಕತ್ವದಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಬಂದಿರಲಿಲ್ಲ. ಇದರಿಂದ ನಮಗೆ ತುಂಬಾ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೇದಿಕೆಯಲ್ಲಿದ್ದ ರಾಜ್ಯ ಸಂಚಾಲ ಯೋಗೀಶ್ ಆಚಾರ್ಯ ಇನ್ನಾ ಮಾತನಾಡಿ, ವಿಶ್ವಕರ್ಮಾ ಸಮಾಜ ಪೂರ್ಣವಾಗಿ ಬಿಜೆಪಿ ಪಕ್ಷದೊಂದಿಗೆ ಕೈಜೋಡಿಸಿದೆ ಎಂದು ಬೆಳ್ತಂಗಡಿ ಶಾಸಕ ಹೇಳಿಕೆ ನೀಡಿದ್ದು, ನಮ್ಮ ಸಮಾಜ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಲ್ಲ. ಶಾಸಕ ಪೂಂಜಾ ಅವರ ಹೇಳಿಕೆ ಖಂಡನೀಯ ಎಂದರು.

- Advertisement -