ಅಂಗನವಾಡಿ ಕಾರ್ಯಕರ್ತೆಯರ ಜತೆ ಸಚಿವ ಅಶ್ವತ್ಥನಾರಾಯಣ ಸಭೆ: ಬೇಡಿಕೆಗಳ ಪರಿಶೀಲನೆಗೆ ಭರವಸೆ

Prasthutha|

ಬೆಂಗಳೂರು: ಮೂರು ದಿನಗಳಿಂದ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಯ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವ ಭರವಸೆಯನ್ನು ಸರಕಾರ ಶನಿವಾರ ನೀಡಿದೆ.

- Advertisement -

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನ್ಯಕಾರ್ಯ ನಿಮಿತ್ತ ತೆರಳಬೇಕಾದ ಹಿನ್ನೆಲೆಯಲ್ಲಿ, ಧರಣಿನಿರತ ಸಂಘಟನೆಯ ಪ್ರಮುಖರನ್ನು ಭೇಟಿ ಮಾಡುವಂತೆ ತಮಗೆ ಸೂಚಿಸಿದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಸರಕಾರದ ಪರವಾಗಿ ಬೇಡಿಕೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಇರುವ ಮಿನಿ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

- Advertisement -

ಇದಲ್ಲದೆ, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ವಿವಿಧ ಭತ್ಯೆಗಳನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಿಸುವುದನ್ನು ಗಮನಕ್ಕೆ ತೆಗೆದುಕೊಳ್ಳಲಾಗುವುದು. ಜತೆಗೆ ಅಂಗನವಾಡಿ ಕೇಂದ್ರಗಳಿಗೆ ಬೇಕಾದ ಪರಿಕರಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನಿಯೋಗಕ್ಕೆ ಮನದಟ್ಟು ಮಾಡಿಕೊಟ್ಟರು.

ರಾಜ್ಯದಲ್ಲಿ 1.36 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರು ಇದ್ದಾರೆ. ಇವರ ಉಳಿದ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ಈ ಭರವಸೆ ಸಿಕ್ಕಿದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡುವ ಭರವಸೆಯನ್ನು ಸಂಘಟನೆಯ ಮುಖ್ಯಸ್ಥೆ ಪ್ರೇಮಾ ಅವರು ಸಚಿವರುಗೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮಂಜುಳಾ ಉಪಸ್ಥಿತರಿದ್ದರು.



Join Whatsapp