ಏಕದಿನ ಸರಣಿ| ನ್ಯೂಜಿಲೆಂಡ್ ವಿರುದ್ಧ ಟೀಮ್‌ ಇಂಡಿಯಾಗೆ 8 ವಿಕೆಟ್‌ಗಳ ಭರ್ಜರಿ ಜಯ

Prasthutha|

ಏಕದಿನ ಸರಣಿಯ ನಿರ್ಣಾಯಕ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್‌ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್‌ ಪಡೆ 2-0 ಮುನ್ನಡೆ ಸಾಧಿಸಿದ್ದು,  ತಾಯ್ನೆಲದಲ್ಲಿ ಸತತ 7ನೇ ಏಕದಿನ ಸರಣಿ ಗೆದ್ದ ಸಾಧನೆ ಮಾಡಿದೆ.

- Advertisement -

ಪ್ರವಾಸಿ ತಂಡವು ಮುಂದಿಟ್ಟಿದ 109 ರನ್‌ಗಳ ಸುಲಭ ಗುರಿಯನ್ನು ರೋಹಿತ್‌ ಪಡೆ, 2 ವಿಕೆಟ್‌ ನಷ್ಟದಲ್ಲಿ 20.1 ಓವರ್‌ಗಳಲ್ಲಿ ತಲುಪಿತು.   ಆರಂಭಿಕ ರೋಹಿತ್‌ ಶರ್ಮಾ 50 ಎಸೆತಗಳಲ್ಲಿ 51 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರೆ, ಕಳೆದ ಪಂದ್ಯದ ದ್ವಿಶತಕ ವೀರ  ಶುಭಮನ್‌ ಗಿಲ್‌ 40 ರನ್‌ ಮತ್ತು ಇಶಾನ್‌ ಕಿಶನ್‌ 8 ರನ್‌ಗಳಿಸಿ ಅಜೇಯರಾಗುಳಿದರು. ವಿರಾಟ್‌ ಕೊಹ್ಲಿ 11 ರನ್‌ಗಳಿಸಿದ್ದ ವೇಳೆ ಸ್ಟಂಪ್‌ ಔಟ್‌ ಆಗಿ ನಿರ್ಗಮಿಸಿದರು.

ನ್ಯೂಜಿಲಂಡ್‌ ಪರ ಶಿಪ್ಲೆ ಪರ ಮತ್ತು ಸ್ಯಾಂಟ್ನರ್‌ ತಲಾ 1 ವಿಕೆಟ್‌ ಪಡೆದರು. ಈ ಸೋಲಿನೊಂದಿಗೆ ನ್ಯೂಜಿಲೆಂಡ್‌ ಭಾರತದಲ್ಲಿ ಸತತ 7ನೇ ಏಕದಿನ ಸರಣಿಯಲ್ಲಿ ಟೀಮ್‌ ಇಂಡಿಯಾಗೆ ಶರಣಾದಂತಾಗಿದೆ.

- Advertisement -

ರಾಯ್‌ಪುರದ ಶಹೀದ್‌ ವೀರ್‌ ನಾರಾಯಣ್‌ ಸಿಂಗ್‌ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಚೊಚ್ಚಲ ಏಕದಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿಸಲ್ಪಟ್ಟ ಟಾಮ್‌ ಲಾಥಮ್‌ ಪಡೆ, 34.3 ಓವರ್‌ಗಳಲ್ಲಿ 108 ರನ್‌ ತಲುಪವಷ್ಟರಲ್ಲಿ ಆಲೌಟ್‌ ಆಗಿತ್ತು.

ಖಾತೆ ತೆರೆಯುವ ಮುನ್ನವೇ ಫಿನ್‌ ಆಲೆನ್‌ ವಿಕೆಟ್‌ ಪಡೆದ ಮುಹಮ್ಮದ್‌ ಶಮಿ ಪ್ರವಾಸಿ ತಂಡಕ್ಕೆ ಆರಂಭದಲ್ಲೇ ಆಘಾತವಿಕ್ಕಿದರು. 15 ರನ್‌ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್‌ ಸೇರಿದ್ದರು.  ಆದರೆ, ಆ ಬಳಿಕ ಗ್ಲೆನ್‌ಫಿಲಿಪ್ಸ್‌ 36, ಕಳೆದ ಪಂದ್ಯ ಶತಕ ವೀರ ಬ್ರಾಸ್‌ವೆಲ್‌ 22 ಮತ್ತು ಮಿಚೆಲ್‌ ಸ್ಯಾಂಟ್ನರ್‌ 27 ರನ್‌ಗಳಿಸುವ ಮೂಲಕ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು.  

ಭಾರತದ ಪರ ಬೌಲಿಂಗ್‌ನಲ್ಲಿ ಶಮಿ, 18 ರನ್‌ ನೀಡಿ 3 ವಿಕೆಟ್‌ ಪಡೆದರೆ, ಹಾರ್ದಿಕ್‌ ಪಾಂಡ್ಯಾ ಮತ್ತು ವಾಷಿಂಗ್ಟನ್ಸುಂದರ್‌ ತಲಾ 2 ವಿಕೆಟ್‌ ಪಡೆದರು. ಸಿರಾಜ್‌, ಠಾಕೂರ್‌ ಹಾಗೂ ಕುಲ್‌ದೀಪ್‌ ಯಾದವ್‌ ತಲಾ 1 ವಿಕೆಟ್‌ ಹಂಚಿಕೊಂಡರು.

Join Whatsapp