ಮೆಕ್ಸಿಕೋ: ಟ್ರಕ್ ಅಪಘಾತದಲ್ಲಿ 54 ಮಂದಿ ವಲಸಿಗರ ದಾರುಣ ಸಾವು

Prasthutha|

ಮೆಕ್ಸಿಕೋ: ದಕ್ಷಿಣ ಮೆಕ್ಸಿಕೋದ ಚಿಯಾಪಾಸ್’ನ ಹೆದ್ದಾರಿ ಮಧ್ಯೆ ಮಾನವ ಕಳ್ಳಸಾಗಣೆ ಜಾಲದ ಕಾರ್ಗೋ ಟ್ರಕ್ ಒಂದು ಉರುಳಿಬಿದ್ದ ಪರಿಣಾಮ 54 ಮಂದಿ ಮೃತಪಟ್ಟಿದ್ದು, 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

- Advertisement -

150ಕ್ಕೂ ಹೆಚ್ಚು ಮಂದಿ ಅಮೆರಿಕನ್ ವಲಸೆಗಾರರನ್ನು ಟ್ರಕ್’ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ದಕ್ಷಿಣ ಮೆಕ್ಸಿಕೋದ ಚಿಯಾಪಾಸ್’ನ ಹೆದ್ದಾರಿ ಮಧ್ಯೆ ಪಾದಚಾರಿ ಸೇತುವೆಗೆ ಅಪ್ಪಳಿಸಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗಾಯಾಳುಗಳ ಪೈಕಿ 40 ಜನರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದವರು ಪೊಲೀಸರಿಗೆ ಹೆದರಿ ಸ್ಥಳದಿಂದ ಓಡಿಹೋಗಿದ್ದಾರೆ ಎಂದು ಚಿಯಾಪಾಸ್ ರಾಜ್ಯ ನಾಗರಿಕ ರಕ್ಷಣಾ ಕಚೇರಿಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಮೊರೆ ಹೇಳಿದ್ದಾರೆ.


ನತದೃಷ್ಟ ಟ್ರಕ್’ನಲ್ಲಿದ್ದವರು ಮಧ್ಯ ಅಮೆರಿಕದಿಂದ ವಲಸೆ ಬಂದವರು ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಕೆಲವರು ನೆರೆಯ ರಾಷ್ಟ್ರ ಗ್ವಾಟೆಮಾಲಾ ಮೂಲದವರಾಗಿದ್ದಾರೆ. ಆದರೆ ಈ ವಿಷಯವನ್ನು ಅಧಿಕಾರಿಗಳು ಇನ್ನೂ ದೃಢೀಕರಿಸಿಲ್ಲ.

- Advertisement -

ಡಿಕ್ಕಿಯ ರಭಸಕ್ಕೆ ಕಂಟೇನರ್ ನಜ್ಜುಗುಜ್ಜಾಗಿದೆ. ಟ್ರಕ್ ಚಾಲಕನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.  ಈ ಟ್ರಕ್ ಗ್ವಾಟೆಮಾಲಾದ ಗಡಿಯ ಸಮೀಪವಿರುವ ಮೆಕ್ಸಿಕೊದಿಂದ, ಮೆಕ್ಸಿಕೊದ ಕೇಂದ್ರ ರಾಜ್ಯವಾದ ಪ್ಯೂಬ್ಲಾಗೆ ತೆರಳಿ  ಆ ಬಳಿಕ ವಲಸಿಗರನ್ನು ಯುಎಸ್ ಗಡಿಗೆ ಕರೆದೊಯ್ಯಲು ಮತ್ತೊಂದು ಗುಂಪಿನ ವಲಸಿಗ ಕಳ್ಳಸಾಗಣೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸಾಧ್ಯತೆ ಇದೆ ಅಧಿಕಾರಿಗಳು ತಿಳಿಸಿದ್ದಾರೆ.  

ಅಧಿಕಾರಿಗಳ ತೀವ್ರ ತಪಾಸಣೆಯ ನಡುವೆಯೂ ಮೆಕ್ಸಿಕೊ ಗಡಿಯಲ್ಲಿ ವಲಸೆಗಾರರ ​​ಕಳ್ಳಸಾಗಣೆ ಮತ್ತು ಅಕ್ರಮ ಒಳನುಸುಳುವಿಕೆ  ಮುಂದುವರೆದಿದೆ. ಕಳೆದ ಅಕ್ಟೋಬರ್‌ನಲ್ಲಿ ಅತಿದೊಡ್ಡ ಮಾನವ ಕಳ್ಳಸಾಗಣೆ ಜಾಲ ಪತ್ತೆಯಾಗಿತ್ತು. 652 ಮಧ್ಯ ಅಮೇರಿಕನ್ ವಲಸಿಗರು US ಗಡಿಯತ್ತ ಸಾಗುತ್ತಿರುವ ಆರು ಸರಕು ಟ್ರಕ್‌’ಗಳನ್ನು  ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

Join Whatsapp