ಚಿಕ್ಕಮಗಳೂರು: ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಹಲವು ಧಾರ್ಮಿಕ ಮುಖಂಡರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ನಿರ್ಧಾರವನ್ನು ಮರು ಪರಿಶೀಲನೆ ನಡೆಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಆಹಾರವನ್ನು ವಿತರಿಸುವ ಹಕ್ಕನ್ನು ತಾಯಂದಿರಿಗೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶಾಲೆಯಲ್ಲಿ ಮೊಟ್ಟೆ ವಿತರಿಸುವ ಬದಲು ಅದಕ್ಕೆ ತಗಲುವ ಹಣವನ್ನು ಮಕ್ಕಳ ತಾಯಂದಿರಿಗೆ ನೀಡಲಿ ಎಂದು ಸಲಹೆ ನೀಡಿದರು.
ಆಹಾರ ಪದ್ಧತಿ ಜನರ ಆಯ್ಕೆಯಾಗಿದೆ ಹೊರತು, ಸರ್ಕಾರ ಆಹಾರಕ್ಕೆ ಸಂಬಂಧಿಸಿದಂತೆ ಜನರ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಈ ನಿಟ್ಟಿನಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲನೆ ನಡೆಸಲಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾರತದಾದ್ಯಂತ ಮಕ್ಕಳು ಅಪೌಷ್ಟಿಕತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಫ್ ಎಚ್ಚರಿಸಿದ ನಡುವೆ ಮಕ್ಕಳ ಮೊಟ್ಟೆಯನ್ನು ಕಸಿದು, ಮಕ್ಕಳ ಆಹಾರದ ಹಕ್ಕಿನ ಮೇಲೆ ಸರ್ಕಾರ ನಿರ್ಬಂಧ ಹೇರಲು ಹೊರಟಿರುವ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.