ನವದೆಹಲಿ : ಖ್ಯಾತ ಮಸಾಲ ಬ್ರಾಂಡ್ ಎಂಡಿಎಚ್ ನ ಸಂಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ ಇಂದು ದೆಹಲಿಯಲ್ಲಿ ನಿಧನರಾದರು. ದೆಹಲಿಯ ಮಾತಾ ಚನನ್ ಆಸ್ಪತ್ರೆಯಲ್ಲಿ ಧರಂಪಾಲ್ ಕೊನೆಯುಸಿರೆಳೆದರು.
98 ವರ್ಷದ ಧರಂಪಾಲ್ ಕಳೆದ ಕೆಲ ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.
ಆಪ್ತ ವಲಯದಲ್ಲಿ ದಾದಾಜಿ, ಮಹಾಶಯಜೀ ಎಂದೇ ಕರೆಯಲ್ಪಡುತ್ತಿದ್ದ ಧರಂಪಾಲ್ 1923ರಲ್ಲಿ ಜನಿಸಿದರು. ಧರಂಪಾಲ್ ಅವರ ತಂದೆ ಈಗಿನ ಪಾಕಿಸ್ತಾನದ ಸಿಯಾಲ್ ಕೋಟ್ ಮೂಲದವರಾಗಿದ್ದು, ಅವರು ಅಲ್ಲಿ ಮಸಾಲ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದರು.
ದೇಶ ವಿಭಜನೆಯ ಬಳಿಕ ದೆಹಲಿಗೆ ಬಂದು ಅಲ್ಲಿ ಒಂದು ಕಿರಾಣಿ ಅಂಗಡಿ ಆರಂಭಿಸಿ, ಅಲ್ಲಿಂದ ತಮ್ಮ ವ್ಯವಹಾರ ಮುಂದುವರಿಸಿದರು. ಈಗ ಎಂಡಿಎಚ್ ಮಸಾಲ ದೇಶದಲ್ಲಿ ಮಸಾಲ ಉತ್ಪನ್ನಗಳಲ್ಲೇ ಜನಪ್ರಿಯವಾದುದು. ಎಂಡಿಎಚ್ ಅಂದರೆ ಮಹಾಶಯನ್ ದಿ ಹಟ್ಟಿ ಬ್ರಾಂಡ್ ಕಟ್ಟಿ ಬೆಳೆಸಿದ ಧರಂಪಾಲ್ 2019ರಲ್ಲಿ ಪದ್ಮಭೂಷಣ ಪ್ರಶಸ್ತಿ ಗೌರವ ಸ್ವೀಕರಿಸಿದ್ದಾರೆ. ಧರಂಪಾಲ್ ನಿಧನಕ್ಕೆ ದೇಶದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.