ಹತ್ರಾಸ್ ಪ್ರಕರಣ: ಅತೀಕುರ್ರಹ್ಮಾನ್ ಗೆ ತಕ್ಷಣ ಶಸ್ತ್ರಚಿಕಿತ್ಸೆ ಕೋರಿ ನ್ಯಾಯಾಲಯಕ್ಕೆ ಅರ್ಜಿ

Prasthutha|

ಲಕ್ನೋ: ಹತ್ರಾಶ್ ಘಟನೆಗೆ ಸಂಬಂಧಿಸಿದಂತೆ ಯುಎಪಿಎ ಪ್ರಕರಣದಲ್ಲಿ ಬಂಧಿತ ಅತೀಕುರ್ರಹ್ಮಾನ್ ಎಂಬಾತನ ಅರೋಗ್ಯ ಸಮಸ್ಯೆ ತೀರ ಹದಗೆಟ್ಟಿದೆ. ಈ ನಿಟ್ಟಿನಲ್ಲಿ ಆತನಿಗೆ ತಕ್ಷಣ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆಗೊಳಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿ ಸೋಮವಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದೆಂದು ಸಂತ್ರಸ್ತನ ವಕೀಲರು ತಿಳಿಸಿದ್ದಾರೆ.

- Advertisement -

ಈ ಹಿಂದೆ ಅತೀಕುರ್ರಹ್ಮಾನ್ ಜೊತೆ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರಾದ ಆಲಂ, ಮಸೂದ್ ಮತ್ತು ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರನ್ನು ದೇಶದ್ರೋಹ ಮತ್ತು ಭಯೋತ್ಪಾದನೆಯ ಸುಳ್ಳಾರೋಪದಡಿಯಲ್ಲಿ ಹತ್ರಾಸ್ ನಲ್ಲಿ ಬಂಧಿಸಲಾಗಿತ್ತು.

ವಿಚಾರಣಾಧೀನ ಕೈದಿಯಾದಿ ಜೈಲಲ್ಲಿರುವ ಅತೀಕುರ್ರಹ್ಮಾನ್ ಎಂಬಾತನ ಆರೋಗ್ಯದ ಕುರಿತು ಕಾಳಜಿ ವಹಿಸುವುದು ಜೈಲು ಅಧೀಕ್ಷಕರ ಕರ್ತವ್ಯ ಎಂದು ಆರೋಪಿ ಪರ ವಕೀಲರಾದ ಮಧುವನ್ ದತ್ ಚತುರ್ವೇದಿ ತಿಳಿಸಿದರು.

- Advertisement -

ಪ್ರಸಕ್ತ ಅನಾರೋಗ್ಯಕ್ಕೀಡಾದ ಅತೀಕುರ್ರಹ್ಮಾನ್ ನಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಲಕ್ನೋ ವಿಶೇಷ ನ್ಯಾಯಾಲಯದ ಆದೇಶದ ಹೊರತಾಗಿಯೂ ಜೈಲು ಅಧಿಕಾರಿಗಳು ಚಿಕಿತ್ಸೆಗೆ ಕರೆದೊಯ್ಯುತ್ತಿಲ್ಲ ಎಂದು ವಕೀಲರು ಆರೋಪಿಸಿದರು.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರಹ್ಮಾನ್ ನನ್ನು ತಕ್ಷಣ ದೆಹಲಿ ಏಮ್ಸ್ ಗೆ ಸ್ಥಳಾಂತರಿಸುವಂತೆ ಮಥುರಾ ಜೈಲು ಪ್ರಾಧಿಕಾರಕ್ಕೆ ಲಕ್ನೋ ನ್ಯಾಯಾಲಯದ ಪೀಠ ಆದೇಶಿಸಿತ್ತು. ಈ ಆದೇಶದ ಎರಡು ವಾರದ ನಂತರ ಆತನನ್ನು ಅಕ್ಟೋಬರ್ 8 ರಂದು ಏಮ್ಸ್ ಕರೆತರಲಾಯಿತು. ರಹ್ಮಾನ್ ಅವರನ್ನು ಪರೀಕ್ಷಿಸಿದ ಏಮ್ಸ್ ವೈದ್ಯರು ತಕ್ಷಣ ಆತನಿಗೆ ಶಸ್ತ್ರಚಿಕಿತ್ಸೆಯ ಸಲಹೆ ನೀಡಿದ್ದಾರೆ.

ಪ್ರಸಕ್ತ ರಹ್ಮಾನ್ ಎಂಬಾತನ ಶಸ್ತ್ರಚಿಕಿತ್ಸೆಗೆ ತಗಲುವ ಹಣ ಬಿಡುಗಡೆಗಾಗಿ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಜೈಲು ಅಧೀಕ್ಷಕ ಬ್ರಿಜೇಶ್ ಕುಮಾರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ವೈದ್ಯರ ಸಲಹೆ ಪಡೆದು ರಹ್ಮಾನ್ ನನ್ನು ಮತ್ತೆ ಮಥುರಾ ಜೈಲಿನ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಹದಿನೈದು ದಿನಗಳ ಬಳಿಕ ದೆಹಲಿ ಏಮ್ಸ್ ಗೆ ಕರೆದೊಯ್ಯಲಾಗುವುದೆಂದು ಜೈಲು ಅಧಿಕಾರಿ ಬ್ರಿಜೇಶ್ ಕುಮಾರ್ ತಿಳಿಸಿದ್ದಾರೆ.

Join Whatsapp