ಪ್ರಸಕ್ತ ಸಂದರ್ಭದಲ್ಲಿ ಗಾಂಧಿ-ಅಂಬೇಡ್ಕರ್ ಚಿಂತನೆಗಳ ಸಮನ್ವಯತೆ ಅಗತ್ಯ: ಡಾ. ರಾಮಚಂದ್ರ ಗುಹಾ

Prasthutha|

ಬೆಂಗಳೂರು: ಪ್ರಸ್ತುತ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳ ಸಮನ್ವಯತೆ ಅಗತ್ಯವಿದೆ ಎಂದು ಹಿರಿಯ ಚರಿತ್ರೆಕಾರ ಡಾ. ರಾಮಚಂದ್ರ ಗುಹಾ ಅಭಿಪ್ರಾಯಪಟ್ಟಿದ್ದಾರೆ.

- Advertisement -

ತಾವು ಬರೆದ “ಗಾಂಧಿ – ದಿ ಇಯರ್ಸ್ ದಟ್ ಚೇಂಜೆಡ್ ದಿ ವಲ್ಡ್ 1914-1948” ಶೀರ್ಷಿಕೆಯಡಿಯ ಎರಡು ಸಂಪುಟಗಳನ್ನು ಲೇಖಕ ಎಂ.ಸಿ. ಪ್ರಕಾಶ್ ಅವರು ‘ ಗಾಂಧಿ: ಪ್ರಪಂಚವನ್ನು ಬದಲಾಯಿಸಿದ ಆ ವರ್ಷಗಳು 1914-1948’ ಶೀರ್ಷಿಕೆಯಡಿ ಅನುವಾದಿಸಿದ್ದು, ನಗರದ ಸುಚಿತ್ರ ಫಿಲಂ ಸೊಸೈಟಿಯ ತರಬೇತಿ ಕೊಠಡಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದ ಕೃತಿಗಳ ಲೋಕಾರ್ಪಣೆ ಸಮಾರಂಭದ ಸಂವಾದದಲ್ಲಿ ಅವರು ಹೀಗೆ ಪ್ರತಿಕ್ರಿಯಿಸಿದರು.

ವ್ಯಕ್ತಿಗತ ನೆಲೆಯಲ್ಲಿ ಒಬ್ಬರು ಮತ್ತೊಬ್ಬರಿಗಿಂತ ಹೆಚ್ಚಿನವರು ಎಂದು ಪರಸ್ಪರರಲ್ಲಿ ಹೇಳಿಕೊಳ್ಳುವ ಬದಲು ಮಹಾತ್ಮ ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ಚಿಂತನೆಗಳು ಸಮನ್ವಯಗೊಳಿಸಿ ಬದುಕಿನ ಸಾಮರಸ್ಯ ಕಂಡುಕೊಳ್ಳುವುದಾದರೆ ದೇಶಕ್ಕೆ ಉತ್ತಮ ಭವಿಷ್ಯವಿದೆ. ಈ ಇಬ್ಬರ ಚಿಂತನೆಗಳು ಮಾನವೀಯತೆಯತ್ತ ತುಡಿಯುತ್ತವೆ ಎನ್ನುವುದು ಮುಖ್ಯ ಎಂದು ಹೇಳಿದರು.

- Advertisement -

ಆತ್ಮಾಭಿಮಾನ ಹಾಗೂ ಆತ್ಮಶುದ್ಧೀಕರಣ ಎರಡೂ ಒಂದಕ್ಕೊಂದು ಅನ್ಯೋನ್ಯ ಸಂಬಂಧ ಹೊಂದಿದೆ. ಒಂದು ಮತ್ತೊಂದರ ಆಸರೆಯನ್ನು ಬಯಸುತ್ತದೆ. ಎರಡೂ ಪ್ರತ್ಯೇಕತೆ ಅಸ್ತಿತ್ವವನ್ನು ಹೊಂದಿಲ್ಲ. ಆದರೆ, ನಮ್ಮ ನಮ್ಮ ಪ್ರತಿಷ್ಠೆಗಳನ್ನು ಮುಂದೆ ಮಾಡಿ, ಗಾಂಧಿ ಚಿಂತನೆ-ಅಂಬೇಡ್ಕರ್ ಚಿಂತನೆ ಎಂದು ಪ್ರತ್ಯೇಕಿಸುವಂತಿಲ್ಲ. ವ್ಯತ್ಯಾಸಗಳೇನಿದ್ದರೂ ವ್ಯಕ್ತಿಗಳ ನೆಲೆಯಲ್ಲಿ ಪರಿಗಣಿಸುವಂತದ್ದು ಮಾತ್ರ. ಈ ಇಬ್ಬರು ಮಹನೀಯರ ಚಿಂತನೆಗಳ ಸಮನ್ವಯತೆಯು ಬದುಕಿನ ಭಾಗವಾಗಬೇಕು. ದೇಶದ ಬಹುದೊಡ್ಡ ಸಮಸ್ಯೆಗಳನ್ನು ಕುರಿತು ಮಾತನಾಡುವಾಗ ಈ ಇಬ್ಬರ ಚಿಂತನೆಗಳು ಅಗತ್ಯವಾಗುತ್ತವೆ ಎಂದು ಹೇಳಿದರು.

ರಾಕ್ಷಸರ ವಿರುದ್ಧದ ಸಮೂಹ: ಗಾಂಧಿ, ಅಂಬೇಡ್ಕರ್, ಫುಲೆ ದಂಪತಿ, ಕಮಲಾಬಾಯಿ ಚಟ್ಟೋಪಾಧ್ಯಯ ಹೀಗೆ ಸಮಾಜದ ಸಮಾನತೆಗಾಗಿ ಹೋರಾಡಿದ ಐತಿಹಾಸಿಕ ವ್ಯಕ್ತಿಗಳ ಚಿಂತನೆಗಳು ರಾಕ್ಷಸರ ವಿರುದ್ಧದ ಸಮೂಹವಾಗಿ ಒಟ್ಟುಗೂಡಬೇಕು. ಆಗಲೇ, ಕೋಮುವಾದ ಪ್ರಚೋದನೆಗೆ ಅವಕಾಶ ಇರದು. ಈ ನಿಟ್ಟಿನಲ್ಲಿ, ಮರು ಚಿಂತನೆ ಅಗತ್ಯ ಹಾಗೂ ಅನಿವಾರ್ಯವಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಗಾಂಧಿ-ಅಂಬೇಡ್ಕರ್ ಅವರ ಚಿಂತನೆಗಳಿಗೆ ಹೆಚ್ಚು ಆದ್ಯತೆ ನೀಡಿದ್ದನ್ನು ಕಾಣಬಹುದು. ಡಿ.ಆರ್. ನಾಗರಾಜ್, ಸಿದ್ಧಲಿಂಗಯ್ಯ, ದೇವನೂರು ಮಹಾದೇವ, ಲಂಕೇಶ್ ಅವರಲ್ಲಿ ಇಂತಹ ಪರಂಪರೆ ಕಾಣಬಹುದು. ಆದರೆ, ಸಾಹಿತ್ಯದಲ್ಲಿ ಇಂತಹ ಚಿಂತನೆಗಳ ಸಮನ್ವಯತೆ ಬೇರೆ ರಾಜ್ಯದಲ್ಲಿ ಕಾಣುತ್ತಿಲ್ಲ. ಇತಿಹಾಸಕಾರ ಸತ್ಯವನ್ನೇ ಹೇಳಬೇಕು. ನಾಯಕರ ಬರೀ ಪ್ರಶಂಸೆ ಸಲ್ಲದು. ವಿಶ್ಲೇಷಣಾತ್ಮಕ ಮನೋಭಾವ ಇರಬೇಕು ಎಂದು ಆಶಿಸಿದರು.

ಗಾಂಧೀಜಿ ಕುರಿತು ತಾವು ಸುದೀರ್ಘವಾಗಿ ಬರೆದಂತೆ ಅಂಬೇಡ್ಕರ್ ಕುರಿತು ಬರೆಯಬೇಕೆಂಬ ಆಸೆ. ಆದರೆ, ಇಂಗ್ಲಿಷ್, ಹಿಂದಿ ಹಾಗೂ ಗುಜರಾತಿ ಭಾಷೆಯಲ್ಲಿ ಗಾಂಧೀಜಿ ಕುರಿತ ವಿಫುಲ ಸಾಹಿತ್ಯವಿದೆ. ಅಂಬೇಡ್ಕರ್ ಕುರಿತ ಹೇರಳ ಸಾಹಿತ್ಯವು ಮರಾಠಿಯಲ್ಲಿದೆ. ತಮಗೆ ಮರಾಠಿ ಬರದು. ಬರೆಯಬೇಕೆಂದರೂ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಸ್ಪಂದಿಸಿದರು.

ಗಾಂಧೀಜಿ ಎಂಬುದು ಜೀವನ ಕ್ರಮ: ಮಹಾತ್ಮ ಗಾಂಧೀಜಿ ಅವರನ್ನು ವ್ಯಕ್ತಿಯಾಗಿ ಅಥವಾ ನಾಯಕರಾಗಿ ನೋಡುವುದಲ್ಲ; ಇಡೀ ಜೀವನ ಕ್ರಮ ಎಂಬಂತೆ ನೋಡಬೇಕು. ಆಗಲೇ, ಅವರ ವಿಚಾರಗಳು ಕಾಲ ಧರ್ಮ ಮೀರಿ ಅನ್ವಯವಾಗುತ್ತವೆ ಎಂದು ಖ್ಯಾತ ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಅಭಿಪ್ರಾಯಪಟ್ಟರು.

ಅನುವಾದಿತ ಈ ಎರಡು ಸಂಪುಟಗಳ ಕುರಿತು ಮಾತನಾಡಿದ ಅವರು, ಗಾಂಧೀಜಿಯನ್ನು ಒಬ್ಬ ವ್ಯಕ್ತಿಯಾಗಿ, ನಾಯಕರಾಗಿ ನೋಡಿದರೆ ಅವರವರ ಭಾವಕ್ಕೆ ತಪ್ಪುಗಳು ಕಾಣುವುದು ಸಹಜ. ಆದರೆ, ಅವರನ್ನು ಜೀವನ ಕ್ರಮವನ್ನಾಗಿ ನೋಡಿದರೆ ಅದು ತತ್ವವಾಗುತ್ತದೆ. ಜೀವನ ಸತ್ವವೂ ಆಗುತ್ತದೆ. ಗಾಂಧೀಜಿ-ಅಂಬೇಡ್ಕರ್ ಚಿಂತನೆಗಳ ಸಮೀಕರಣವು ಅಗತ್ಯವಿದೆ. ಈ ಇಬ್ಬರ ಚಿಂತನೆಗಳನ್ನು ಮಂಜುಗಣ್ಣನಿಂದ ನೋಡಬಾರದು. ಸಂಶೋಧನಾತ್ಮಕ ರೀತಿಯಲ್ಲಿ ಗಾಂಧೀಜಿಯ ನೈಜ ವ್ಯಕ್ತಿತ್ವದ ಕುರುಹುಗಳಾಗಿ ರಾಮಚಂದ್ರ ಗುಹಾ ಅವರ ಕೃತಿಗಳು ಇದ್ದು, ಮೂಲ ಕೃತಿ ರಚನೆ ಹಾಗೂ ಎಂ.ಸಿ. ಪ್ರಕಾಶ್ ಅವರ ಅನುವಾದ ಈ ಎರಡರ ಹಿಂದೆ ಅಸಾಧಾರಣವಾದ ಸಂಯಮವಿದೆ ಎಂದು ಪ್ರಶಂಸಿಸಿದರು.

ಗಾಂಧೀಜಿ ಪಯಣವೇ ಮಾದರಿ-ಅಚ್ಚರಿ: ಹಿರಿಯ ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು ಕೃತಿಗಳ ಕುರಿತು ಮಾತನಾಡಿ, ಮಹಾತ್ಮ ಗಾಂಧೀಜಿಯ ಬದುಕಿನ ಪಯಣವೇ ಒಂದು ಅಚ್ಚರಿ ಮಾತ್ರವಲ್ಲ; ಅನುಕರಣೀಯ ಮಾದರಿಯೂ ಆಗಿದೆ. ಯಾರಿಗೂ ಬೇಸರ ಮೂಡಿಸದಂತಹ ವ್ಯಕ್ತಿತ್ವ ಅವರದ್ದು. ಮಹಾತ್ಮ ಗಾಂಧೀಜಿ ಕೇವಲ ಚಾರಿತ್ರಿಕ ವ್ಯಕ್ತಿಯಲ್ಲ; ದಂತಕಥೆಯಾಗಿಯೂ ನಮ್ಮನ್ನು ಆವರಿಸಿಕೊಂಡಿದ್ದಾರೆ.‘ಗಾಂಧಿ: ಪ್ರಪಂಚವನ್ನು ಬದಲಿಸಿದ ಆ ವರ್ಷಗಳು’ ಎಂಬ ಶೀರ್ಷಿಕೆಯೇ ಅದ್ಭುತ ಎಂದು ಕೃತಿಯ ರಚನೆಯನ್ನು ಪ್ರಶಂಸಿಸಿದರು.

ಎಚ್ಚರದ ಹಾಗೂ ಸವಾಲಿನ ಕೆಲಸ: ಅಮೆರಿಕದಲ್ಲಿದ್ದ ಅನುವಾದಕ ಎಂ.ಸಿ. ಪ್ರಕಾಶ್ ಅಂತರ್ಜಾಲದ ಮೂಲಕ ಮಾತನಾಡಿ ‘ರಾಮಚಂದ್ರ ಗುಹಾ ಅವರ ಪ್ರಬುದ್ಧ ಶೈಲಿಯ ಹಾಗೂ ಉತ್ಕೃಷ್ಟ ಭಾಷೆಯ, ಗಂಭೀರ ಸಂಶೋಧನೆಯ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವ ಕೆಲಸ ಎಚ್ಚರಿಕೆಯದ್ದು ಮಾತ್ರವಲ್ಲ; ಸವಾಲಿನ ಕೆಲಸವೂ ಆಗಿತ್ತು. ಮೂಲ ಭಾವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಶ್ರದ್ಧೆಯಿಂದ ಅನುವಾದ ಮಾಡಿದ್ದರ ಪರಿಣಾಮವೇ ಈ ಕೃತಿಗಳು ರೂಪ ತಳೆದಿವೆ ಎಂದರು.


ಪತ್ರಕರ್ತ ಹಾಗೂ ಲೇಖಕ ಸತೀಶ್ ಚಪ್ಪರಿಕೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಸಂತ ಪ್ರಕಾಶನದ ಮುರುಳಿ ಸೇರಿದಂತೆ ಇತರೆ ಗಣ್ಯರು ಪಾಲ್ಗೊಂಡಿದ್ದರು. ವಸಂತ ಪ್ರಕಾಶನ ಹಾಗೂ ಬುಕ್ ಬ್ರಹ್ಮ ಸಹಯೋಗದ ಈ ಸಮಾರಂಭವನ್ನು ಬುಕ್ ಬ್ರಹ್ಮ ಸಂಸ್ಥೆಯ ಫೇಸ್ ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನಲ್ ನೇರ ಪ್ರಸಾರ ಮಾಡಿತು.

Join Whatsapp