ಡೆಹ್ರಾಡೂನ್: ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಸಂಘಪರಿವಾರ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮತ್ತು ಹಿಂಸಾಚಾರಕ್ಕೆ ಕರೆ ನೀಡಿದ ನಡೆಯನ್ನು ವಿರೋಧಿಸಿ ಡೆಹ್ರಾಡೂನ್ ನಲ್ಲಿರುವ ಉತ್ತರಾಖಂಡ್ ಪೊಲೀಸ್ ಪ್ರಧಾನ ಕಚೇರಿಯ ಹೊರಗೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದ ಸಂಘಪರಿವಾರದ ಎಲ್ಲಾ ಮುಖಂಡರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಮುಸ್ಲಿಮ್ ಸೇವಾ ಎಂಬ ಸಂಘಟನೆಯ ಬ್ಯಾನರ್ ಅಡಿಯಲ್ಲಿ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುಸ್ಲಿಮ್ ಸೇವಾ ಸಂಘಟನೆಯ ಅಧ್ಯಕ್ಷ ನಯೀಮ್ ಖುರೇಶಿ, ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದವರ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಹೊರಗೆ ಸಾವಿರಾರು ಮುಸ್ಲಿಮರು ಜಮಾಯಿಸಿ ಹಿಂಸಾಚಾರ ಕರೆಗಳ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ ಎಂದು ತಿಳಿಸಿದರು.
ಪ್ರತಿಭಟನಾಕಾರರ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಪ್ರಕರಣವನ್ನು ಎಸ್.ಐ.ಟಿ ವಹಿಸಿದ್ದಾರೆ ಮತ್ತು ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ ಎಂದು ಖುರೇಶಿ ಮಾಧ್ಯಮಕ್ಕೆ ತಿಳಿಸಿದ್ದಾರೆ.