ಉತ್ತರಾಖಂಡ: ‘ದಲಿತ-ಮೇಲ್ಜಾತಿ’ ಹೋರಾಟದಲ್ಲಿ ಗೆದ್ದ ಸುನಿತಾ ದೇವಿ !

Prasthutha|

ಉತ್ತರಾಖಂಡ: ಹಿಂದೂ ಧರ್ಮದ ‘ಮೇಲ್ಜಾತಿ’ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದ ದಲಿತ ಮಹಿಳೆ ಸುನಿತಾ ದೇವಿ ಅವರನ್ನು ಉತ್ತರಾಖಂಡ ರಾಜ್ಯ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಮತ್ತೆ ಅಡುಗೆ ಕೆಲಸಕ್ಕೆ ನೇಮಕ ಮಾಡಲಾಗಿದೆ.

- Advertisement -

ಚಂಪಾವತ್ ಜಿಲ್ಲೆಯ ಸುಖೀಧಂಗ್‌ನ  ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿನ ತನ್ನ ನೇಮಕಾತಿ ರದ್ದು ಮಾಡಿದ ಕ್ರಮದ ವಿರುದ್ಧ ಸುನಿತಾ ದೇವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ದೂರಿನನ್ವಯ, ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಡಿ 31 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, 6 ಮಂದಿಯ ಹೆಸರನ್ನು FIRನಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರದಲ್ಲಿ ಉತ್ತಾರಾಖಂಡ SC/ST ಆಯೋಗ ನ್ಯಾಯಾಲಯದ ಮೊರೆ ಹೋಗುವ ನಿರ್ಧಾರ ತೆಗೆದುಕೊಂಡ ಬೆನ್ನಲ್ಲೆ ಎಚ್ಚೆತ್ತುಕೊಂಡ ಅಧಿಕಾರಿಗಳು, ಚಂಪಾವತ್ ಜಿಲ್ಲೆಯ ಮುಖ್ಯ ಶಿಕ್ಷಣಾಧಿಕಾರಿ ಆರ್ ಸಿ ಪುರೋಹಿತ್ ನೇತೃತ್ವದಲ್ಲಿ ಸಭೆ ಸೇರಿ ಸುನಿತಾ ದೇವಿ ಅವರನ್ನು ಮರು ನೇಮಕಾತಿ ಮಾಡುವಂತೆ ಸೂಚನೆ ನೀಡಿತ್ತು. ಈ ಕೆಲಸಕ್ಕೆ SC/ST ಅಥವಾ OBC ಸಮುದಾಯದ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕಿದೆ ಎಂದು ನಿಯಮವಿರುವುದಾಗಿ ಪುರೋಹಿತ್ ಹೇಳಿದ್ದಾರೆ.

ಆದರೆ ಇದೇ ಅಧಿಕಾರಿ ಈ ಹಿಂದೆ, ಸುನಿತಾ ದೇವಿಯವರನ್ನು ಉಚ್ಛಾಟಿಸಿದ ಕ್ರಮವನ್ನು ಸಮರ್ಥಿಸಿ, ನೇಮಕಾತಿಯಲ್ಲಿ ಲೋಪವಾಗಿರುವುದಾಗಿ ಹೇಳಿದ್ದರು. ಇದೀಗ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಪುರೋಹಿತ್ ಹಾಗೂ ಶಾಲಾ ಆಡಳಿತ ಸಮಿತಿ ಅನಿವಾರ್ಯವಾಗಿ ತಮ್ಮ ನಿರ್ಧಾರ ಬದಲಾಯಿಸಿದೆ. ಹೀಗಾಗಿ ಶಾಲಾ ಆಡಳಿತ ಸಮಿತಿ ಸುನಿತಾ ದೇವಿಯವರನ್ನು ಉಚ್ಛಾಟಿಸಿದ ಮರುದಿನವೇ ಮರು ನೇಮಕಾತಿ ಮಾಡಿರುವುದಾಗಿ ತಿಳಿಸಿದೆ. ಘಟನೆ ಕುರಿತು ಉತ್ತರಾಖಂಡ ಮುಖ್ಯಮಂತ್ರಿಪುಷ್ಕರ್ ಸಿಂಗ್ ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ.

- Advertisement -

ಚಂಪಾವತ್ ಜಿಲ್ಲೆಯ ಸುಖೀಧಂಗ್‌ನ  ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ತಯಾರಿಸಲು ನೇಮಕವಾಗಿದ್ದ ಸುನಿತಾ ದೇವಿ, ದಲಿತ ಸಮುದಾಯಕ್ಕೆ ಸೇರಿದ್ದಾರೆ ಎಂಬ ನೆಪವೊಡ್ಡಿ ಶಾಲೆಯ ಹಿಂದೂ ಧರ್ಮದ ‘ಮೇಲ್ಜಾತಿ’ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಬಹಿಷ್ಕರಿಸಿದ್ದರು. ‘ಮೇಲ್ಜಾತಿ’ ವಿದ್ಯಾರ್ಥಿಗಳ ಹಾಗೂ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸುನಿತಾ ದೇವಿಯನ್ನು ಕೆಲಸದಿಂದ ವಜಾ ಮಾಡಿಲಾಗಿತ್ತು. ಈ ವಿಚಾರ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.

Join Whatsapp