ಡಿಸೆಂಬರ್ 17ರಂದು ಏಕನಾಥ್ ಶಿಂದೆ ಸರ್ಕಾರದ ವಿರುದ್ಧ  ಬೃಹತ್ ಪ್ರತಿಭಟನೆ: ಉದ್ಧವ್ ಠಾಕ್ರೆ

Prasthutha|

ಮುಂಬೈ: ಛತ್ರಪತಿ ಶಿವಾಜಿಯ ಕುರಿತು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಹೇಳಿಕೆ ಮತ್ತು ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಏಕನಾಥ್ ಶಿಂದೆ ಸರ್ಕಾರದ ವಿರುದ್ಧ  ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಪ್ರತಿಪಕ್ಷ ಮಹಾರಾಷ್ಟ್ರ ವಿಕಾಸ ಆಘಾಡಿ (ಎಂವಿಎ) ಘೋಷಿಸಿದೆ.

- Advertisement -

ಸೋಮವಾರ ತಡ ರಾತ್ರಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಉದ್ಧವ್ ಠಾಕ್ರೆ , ರಾಜ್ಯ ಸರ್ಕಾರದ ವಿರುದ್ಧ ಡಿಸೆಂಬರ್ 17ರಂದು ಇಲ್ಲಿನ ಜೀಜಾ ಮಾತಾ ಉದ್ಯಾನವನದಿಂದ ಆಜಾದ್ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಣೆ ಮಾಡಿದರು.

ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಮಾತನಾಡಿರುವುದು ಸರಿಯಲ್ಲ ಅವರನ್ನು ಕೇಂದ್ರಕ್ಕೆ ವಾಪಸ್ಸು ಕಳುಹಿಸಬೇಕು ಎಂದು ಆಗ್ರಹಿಸಿದರು.

- Advertisement -

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕದ ಮುಖ್ಯಮಂತ್ರಿಗಳು ನಮ್ಮ ರಾಜ್ಯದ ಹಲವು ಪ್ರದೇಶಗಳನ್ನು ಕೇಳುತ್ತಾರೆ. ಆದರೆ ನಮ್ಮ ಮುಖ್ಯಮಂತ್ರಿಗಳು ಇದನ್ನು ಕೇಳಿಸಿಕೊಂಡು ಮೌನವಾಗಿದ್ದಾರೆ.  ಹಾಗಾದರೆ ಇಲ್ಲಿ ಇರುವುದು ಬಿಜೆಪಿ ಸರ್ಕಾರವೇ ಎಂದು ಪ್ರಶ್ನೆ ಮಾಡಿದ್ದಾರೆ.

ನಮ್ಮ ರಾಜ್ಯವನ್ನು ಅವಮಾನಿಸುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ನಾವು ಈ ಹೋರಾಟವನ್ನು ಮಾಡುತ್ತಿದ್ದೇವೆ ಎಂದು  ಠಾಕ್ರೆ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿಪಿ ಪಕ್ಷದ ನಾಯಕರು ಉಪಸ್ಥಿತರಿದ್ದರು.

Join Whatsapp