ಹೊಸದಿಲ್ಲಿ: ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಕೇಂದ್ರ ಸಚಿವರೊಬ್ಬರ ಮನೆ ಮೇಲೆ ಗುಂಪೊಂದು ನಿನ್ನೆ ರಾತ್ರಿ ದಾಳಿ ಮಾಡಿದೆ. ಘಟನೆಯ ವೇಳೆ ಕೇಂದ್ರ ಸಚಿವ ಆರ್ಕೆ ರಂಜನ್ ಸಿಂಗ್ ಮನೆಯಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ನಿನ್ನೆಯಷ್ಟೇ ಮಣಿಪುರದ ಏಕೈಕ ಮಹಿಳಾ ಸಚಿವೆ ನೆಮ್ಚಾ ಕಿಪ್‌ಗೆನ್ ಅವರ ಅಧಿಕೃತ ನಿವಾಸಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆ ವೇಳೆ ಮನೆಯೊಳಗೆ ಯಾರೂ ಇರಲಿಲ್ಲವಾದರೂ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಬೆಂಕಿಯ ಹೊಣೆಯನ್ನು ಇನ್ನೂ ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯಾಚರಣೆ ಆರಂಭಿಸಿದ್ದರು.
ರಾಜ್ಯದಲ್ಲಿ ಇತ್ತೀಚಿನ ಹಿಂಸಾಚಾರದಲ್ಲಿ, ಕಳೆದ 24 ಗಂಟೆಗಳಲ್ಲಿ ಮಹಿಳೆ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಖಾಮೆನ್ಲೋಕ್ ಪ್ರದೇಶದಲ್ಲಿ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.