ಚಂಡಮಾರುತದ ಅಬ್ಬರ ನಡುವೆ ಹೆಣ್ಣುಮಗುವಿಗೆ ‘ಬಿಪರ್‌ಜಾಯ್‌’ ಅಂತ ಹೆಸರಿಟ್ಟ ದಂಪತಿ!

Prasthutha|

ಗಾಂಧೀನಗರ: ಭೂಕಂಪಗಳು ಮತ್ತು ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಹುಟ್ಟಿದ ಮಕ್ಕಳಿಗೆ ಅದೇ ಹೆಸರಿಡುವ ವಿಚಿತ್ರ ಪ್ರವೃತ್ತಿ ಹೊಸದೇನಲ್ಲ. ಅರಬ್ಬಿ ಸಮುದ್ರದಲ್ಲಿ ಈಗ ಬಿಪರ್‌ಜಾಯ್‌ ಚಂಡಮಾರುತ ಅಬ್ಬರ ಜೋರಾಗಿದೆ. ಬಿರುಗಾಳಿ, ಭಾರೀ ಮಳೆ ತರುವ ಅಪಾಯದ ಈ ಸೈಕ್ಲೋನ್‌ ಹೆಸರನ್ನೇ ಗುಜರಾತ್‌ನಲ್ಲಿ ನವಜಾತ ಹೆಣ್ಣು ಶಿಶುವಿಗೆ ಇಡಲಾಗಿದೆ.

- Advertisement -

ಚಂಡಮಾರುತದ ಭೀಕರತೆಯಿಂದಾಗಿ ಭೂಕುಸಿತ ಉಂಟಾಗಿದೆ. ಸೈಕ್ಲೋನ್‌ ಹೆಚ್ಚಿನ ಅಪಾಯದ ಸೂಚನೆ ನೀಡಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊಂಡವರಲ್ಲಿ ʼಬಿಪರ್‌ಜಾಯ್‌ʼ ಎಂದು ಹೆಸರು ಪಡೆದ ಶಿಶುವಿನ ತಾಯಿಯೂ ಒಬ್ಬರು.

ಒಂದು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ, ಈಗ ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಎಂಬಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಬ್ಬರಿಸುತ್ತ ಜನರನ್ನು ಕಾಡುತ್ತಿರುವ ಸೈಕ್ಲೋನ್‌ ಹೆಸರನ್ನೇ ಈಗ ತಮ್ಮ ಮಗಳಿಗೆ ಇಟ್ಟಿದ್ದಾರೆ.

- Advertisement -

ಕೊರೊನಾ ಸಾಂಕ್ರಾಮಿಕ ತೀವ್ರ ಸ್ವರೂಪದಲ್ಲಿದ್ದಾಗ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ದಂಪತಿ ತಮ್ಮ ಮಗುವಿಗೆ ‘ಕೊರೊನಾ’ ಎಂದು ಹೆಸರಿಟ್ಟಿದ್ದರು. ಅಂತೆಯೇ ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲೂ ವೈರಸ್‌ನ ಹೆಸರನ್ನು ಮಗುವೊಂದಕ್ಕೆ ಇಡಲಾಗಿತ್ತು.

ರಾಜಸ್ಥಾನದ ಕುಟುಂಬವೊಂದರ ದಂಪತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮಗುವಿಗೆ ವಿಚಿತ್ರವಾಗಿ ಹೆಸರಿಟ್ಟರು. ಕೋವಿಡ್‌ ತಡೆಗಟ್ಟಲು ವಿಧಿಸಲಾಗಿದ್ದ ಲಾಕ್‌ಡೌನ್‌ ಸಂದರ್ಭದಲ್ಲಿ ಜನಿಸಿದ ಗಂಡು ಮಗುವಿಗೆ ‘ಲಾಕ್‌ಡೌನ್‌’ ಎಂದೇ ಹೆಸರಿಟ್ಟಿದ್ದರು.

Join Whatsapp