ಮಂಗಳೂರು: ನಗರದಲ್ಲಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರದ ಕೀರ್ತೇಶ್ವರ ನಿವಾಸಿ ಪ್ರಶ್ಚಿತ್ (25) ಬಂಧಿತ ವ್ಯಕ್ತಿ.
ಕಂಕನಾಡಿಯಲ್ಲಿ ಪ್ರಶ್ಚಿತ್ ನಕಲಿ ನೋಟುಗಳ ಚಲಾವಣೆಗೆ ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಪ್ರಶ್ಚಿತ್ 500 ರೂ., 200 ರೂ. ಮತ್ತು 100 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಚಲಾವಣೆ ಮಾಡಿದ್ದು, ಈವರೆಗೆ ಸುಮಾರು 8 ರಿಂದ 9 ಸಾವಿರ ರೂ.ಗಳ ಖೋಟಾ ನೋಟುಗಳನ್ನು ಚಲಾವಣೆ ಮಾಡಿರುವುದನ್ನು ಪತ್ತೆ ಮಾಡಲಾಗಿದೆ. ಬಂಧಿತನಿಂದ ನಕಲಿ ನೋಟುಗಳಾದ 500 ರೂ. ಮುಖಬೆಲೆಯ 3 ನೋಟುಗಳು, 200 ರೂ. ಮುಖಬೆಲೆಯ 2 ನೋಟುಗಳು ಹಾಗೂ 100 ರೂ. ಮುಖ ಬೆಲೆಯ 3 ನೋಟುಗಳು ಹಾಗೂ ಮೊಬೈಲ್ ಫೋನ್ ವಶಪಡಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ರವರ ಮಾರ್ಗದರ್ಶನ, ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.