ಮಂಗಳೂರು: ವಕೀಲೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಸಾರ್ವಜನಿಕರ ಮುಂದೆ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ನಿರ್ವಾಹಕ ಮತ್ತು ಚಾಲಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಭರತ್ ಸಾಲಿಯ್ಯಾನ್ ಮತ್ತು ಶಶಿಕುಮಾರ್ ಬಂಧಿತರು. ಇಂದು ಬೆಳಿಗ್ಗೆ ಮಂಗಳೂರು ಪೂರ್ವ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಮಧ್ಯಾಹ್ನ ಮಾನ್ಯ 6 ನೇ ಜೆ ಎಂ ಎಫ್ ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಇಬ್ಬರಿಗೂ ಮಂಗಳೂರು ಆರನೇ ಜೆಎಂಎಫ್ ಸಿ ನ್ಯಾಯಾಲಯ 14ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ವೃತ್ತಿಯಲ್ಲಿ ವಕೀಲೆಯಾಗಿರುವ ಮಹಿಳೆಯೊಬ್ಬರು ಪಿವಿಎಸ್ ಸರ್ಕಲ್ ಬಳಿ ಬೋಂದೆಲ್ ನಿಂದ ಸ್ಟೆಟ್ ಬ್ಯಾಂಕ್ ಗೆ ತೆರಳುವ ರೂಟ್ ನಂಬರ್ 19, ಆಶೆಲ್ ಬಸ್ ನ್ನು ಹತ್ತಲು ಹೋಗಿದ್ದಾರೆ. ಈ ವೇಳೆ ಬಸ್ ಡ್ರೈವರ್ ಎಕಾಏಕಿ ಬಸ್ ನ್ನು ಚಲಾಯಿಸಿದ್ದು, ಮಹಿಳೆ ರಸ್ತೆಗೆ ಬೀಳುವ ವೇಳೆ ಬಸ್ ನ ನಿರ್ವಾಹಕ ಮಹಿಳೆಯ ಕೈಯನ್ನು ಹಿಡಿದು ಎಳೆದು ಸಾರ್ವಜನಿಕರ ಎದುರೇ ”ನೀವು ಮುಸ್ಲಿಂ ಹೆಂಗಸರಿಗೆ ತುಂಬಾ ಅಹಂಕಾರ, ಬೇಕಾದರೆ ನಮ್ಮ ಬಸ್ಸಲ್ಲಿ ಬರಬೇಕು ಇಲ್ಲದಿದ್ದರೆ ಇಳಿಯಬೇಕು” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಕುರಿತಂತೆ ವಕೀಲೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.