ಇಸ್ಲಾಂ ಮತ್ತು ಸೌದಿ ದೊರೆಗೆ ನಿಂದನೆಗೈದ ಮಂಗಳೂರು ಯುವಕ ಜೈಲುಪಾಲು : ಬಿಡುಗಡೆಗೆ ಪತ್ನಿಯ ಮೊರೆ

Prasthutha|

ಮಂಗಳೂರು : ಸೌದಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಮಂಗಳೂರು ಬಿಕರ್ನಕಟ್ಟೆ ನಿವಾಸಿ ಶೈಲೇಶ್ ಕುಮಾರ್ ಎಂಬಾತ ಇಸ್ಲಾಂ ಹಾಗೂ ಸೌದಿ ದೊರೆಯ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಹರಿಯಬಿಟ್ಟಿದ್ದ ಎಂಬ ಆರೋಪದ ಮೇಲೆ ಸೌದಿಯಲ್ಲಿ ಆತನನ್ನು ಬಂಧಿಸಲಾಗಿತ್ತು. ಶೈಲೇಶ್ ಕಳೆದ 25 ವರ್ಷಗಳಿಂದ ಸೌದಿಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಇದೀಗ ಆತನ ಪತ್ನಿ ಪತ್ರಿಕಾಗೋಷ್ಠಿ ನಡೆಸಿ,  ಆತನ ಮೇಲಿರುವ ಆರೋಪಗಳು ನಕಲಿ. ಆತನನ್ನು ಬಿಡುಗಡೆಗೊಳಿಸುವಂತೆ ಕೋರಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

- Advertisement -

2020 ರಲ್ಲಿ ಶೈಲೇಶ್ ಗೆ ಅನಾಮಧೇಯ ಕರೆಗಳ ಮೂಲಕ ಫೆಸ್ಬುಕ್ ಖಾತೆ ಡಿಲೀಟ್ ಮಾಡುವಂತೆ ಬೆದರಿಕೆ ಬಂದಿತ್ತು.  ಕರೆ ಮಾಡಿದ ವ್ಯಕ್ತಿ ಶೈಲೇಶ್ ಗೆ ಜೀವ ಬೆದರಿಕೆ ಹಾಕಿದ್ದ. ಆ ಕಾರಣಕ್ಕಾಗಿ ಶೈಲೇಶ್ ತನ್ನ ಖಾತೆಯನ್ನು ಡಿಲೀಟ್ ಮಾಡಿದ್ದ. ಆ ಬಳಿಕ ಅಂದರೆ ಫೆಬ್ರವರಿ 12ರಂದು ಶೈಲೇಶ್ ಖಾತೆಯಿಂದ ಇಸ್ಲಾಂ ಹಾಗೂ ಸೌದಿ ದೊರೆಯ ವಿರುದ್ಧ ಅವಹೇಳನಕಾರಿಯಾದಂತಹಾ ಪೋಸ್ಟ್ ಮಾಡಲಾಗಿತ್ತು. ಆ ಪೋಸ್ಟನ್ನು ಸೌದಿ ಪೊಲೀಸರಿಗೆ ದೊರೆಯುವಂತೆ ಮಾಡಲಾಗಿತ್ತು. ಇದರ ವಿರುದ್ಧ ಫೆಬ್ರವರಿ 23ರಂದು ಪೊಲೀಸರಿಗೆ ದೂರು ನೀಡಲು ಹೋಗಿದ್ದ ಶೈಲೇಶ್ ನನ್ನು ಸೌದಿ ಪೊಲೀಸರು ಬಂಧಿಸಿದ್ದರು ಎಂದು ಪತ್ನಿ ಆರೋಪಿಸಿದ್ದಾರೆ. ಶೈಲೇಶ್ ನಿರಪರಾಧಿ, ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಪತ್ನಿ ಅಭಿಪ್ರಾಯಪಟ್ಟಿದ್ದಾರೆ.  

ಶೈಲೇಶ್ ಬಂಧನದ ಬಳಿಕ ಕುಟುಂಬಸ್ಥರು ಘಟನೆ ಬಗ್ಗೆ ಭಾರತೀಯ ರಾಯಭಾರ ಕಚೇರಿಗೆ ದೂರು ನೀಡಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದ ರಾಯಭಾರ ಕಚೇರಿ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ. ಆ ಬಳಿಕ 2021 ಆಗಸ್ಟ್ 28ರಂದು ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಈ ಕುರಿತು ದೂರು ನೀಡಲಾಗಿತ್ತು. ಶೈಲೇಶ್ ಖಾತೆ ನಕಲಿ ಎನ್ನುವುದು ಕುಟುಂಬದ ಆರೋಪವಾಗಿದೆ.  

- Advertisement -

ಇಂತಹದ್ದೇ ಹಲವು ಘಟನೆಗಳು ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿದೆ. ಕೊಲ್ಲಿ ರಾಷ್ಟ್ರಗಳಲ್ಲಿರುವ ಬಿಜೆಪಿ ಮತ್ತು ಸಂಘಪರಿವಾರದ ಬೆಂಬಲಿಗರು ಅಲ್ಲಿನ ನೆಲದ ಕಾನೂನಿಗೆ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಮಾಡಿ ಆ ಬಳಿಕ ಅದು ನಕಲಿ ಖಾತೆ, ನಾನು ಪೋಸ್ಟ್  ಮಾಡಿಲ್ಲ, ಕ್ಷಮೆ ಕೇಳಿ ವೀಡಿಯೋ ಮಾಡುವುದು ನಡೆದುಕೊಂಡು ಬರುತ್ತಿದೆ.  ಶೈಲೇಶ್ ಪ್ರಕರಣವು ಕೂಡಾ ಅದನ್ನೇ ಹೋಲುತ್ತಿದೆ. ಫೇಸ್ಬುಕ್ ಖಾತೆಯನ್ನೇ ಡಿಲೀಟ್ ಮಾಡಿ ಎಂಬ ಬೆದರಿಕೆ ಕರೆ, ಆ ಬಳಿಕ ಅವಹೇಳನಕಾರಿ ಪೋಸ್ಟ್ ಇವೆಲ್ಲವೂ ಅನುಮಾನಕ್ಕೆ ಕಾರಣವಾಗಿದೆ. ಸೌದಿ ಪೊಲೀಸರ ತನಿಖೆ ಮಾತ್ರ ವಾಸ್ತವ ತೆರೆದಿಡಲಿದೆ

Join Whatsapp