ರಿಯಾದ್: ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ತೆರಳುತ್ತಿರುವ ಶಿಹಾಬ್ ಚೋಟ್ಟೂರು ಅವರನ್ನು ಭೇಟಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಸೌದಿ ಅರೇಬಿಯಾದ ಖಸಿಮ್ ಪ್ರಾಂತ್ಯದ ರಿಯಾದ್-ಮದೀನಾ ಹೆದ್ದಾರಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮಲಪ್ಪುರಂ ವಂಡೂರಿನ ಕೂರಾಡ್ ನಿವಾಸಿ ಅಬ್ದುಲ್ ಅಝೀಝ್ (47) ಎಂದು ಗುರುತಿಸಲಾಗಿದೆ. ಅಝೀಝ್, ಅಲ್ ರಾಸ್ ನಲ್ಲಿ ಕೆಲಸ ಮಾಡುತ್ತಿದ್ದು ಕುಟುಂಬ ಸಮೇತ ವಾಸವಾಗಿದ್ದಾರೆ. ಅಲ್ ರಾಸ್ ದಾರಿಯಾಗಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಶಿಹಾಬ್ ಚೋಟೂರ್ ಅವರನ್ನು ಭೇಟಿಯಾಗಿ ಸೆಲ್ಫಿ ತೆಗೆದು ಬಳಿಕ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮೃತದೇಹವನ್ನು ತವರಿಗೆ ತಲುಪಿಸುವ ವ್ಯವಸ್ಥೆಗಳು ನಡೆಯುತ್ತಿದೆ ಎಂದು ತಿಳಿದು ಬಂದಿದೆ.
2022 ಜೂನ್ 2 ರಂದು, ಹಜ್ ನಿರ್ವಹಿಸಲು ಮಲಪ್ಪುರಂನ ವಲಂಚೇರಿ ಬಳಿಯ ಚೋಟ್ಟೂರಿನ ಚೆಲಂಬದನ್ ತರವಾಡ್ ನಿಂದ ಶಿಹಾಬ್ ಕಾಲ್ನಡಿಗೆ ಮೂಲಕ ಪ್ರಯಾಣವನ್ನು ಪ್ರಾರಂಭಿಸಿದ್ದರು.
ಅಧಿಕೃತ ಹೇಳಿಕೆ ನೀಡಿದ ಪೊಲೀಸರು
ಆದರೆ ಅಧಿಕೃತ ಹೇಳಿಕೆ ಪ್ರಕಾರ, ಮೃತಪಟ್ಟ ಅಬ್ದುಲ್ ಅಝೀಝ್ ಅವರು ಶಿಹಾಬ್ ಅವರೊಂದಿಗೆ ನಡೆಯುತ್ತಿರಲಿಲ್ಲ. ಶಿಹಾಬ್ ಅವರನ್ನು ಭೇಟಿಯಾಗಲು ಬಂದಿದ್ದರು. ಶಿಹಾಬ್ ಅವರು 10 ಕಿ.ಮೀ.ಮುಂದೆ ಹೋಗಿದ್ದಾಗ ಅಬ್ದುಲ್ ಅಝೀಝ್ ಅವರಿಗೆ ಅಪಘಾತವಾದ ಸುದ್ದಿ ಲಭಿಸಿತು ಎಂದು ತಿಳಿದುಬಂದಿದೆ.
ಸ್ಪಷ್ಟನೆ ನೀಡಿದ ಶಿಹಾಬ್
ದಾರಿಯುದ್ದಕ್ಕೂ ಹಲವರು ನನ್ನನ್ನು ಭೇಟಿಯಾಗಿ ಶುಭ ಹಾರೈಸುತ್ತಾರೆ. ಅದೇ ರೀತಿ ನಿನ್ನೆ ಅಬ್ದುಲ್ ಅಝೀಝ್ ಅವರು ನನ್ನನ್ನು ಭೇಟಿಯಾಗಿದ್ದರು. ಅದಾಗಿ ಸುಮಾರು 10 ಕಿ.ಮೀ.ದೂರ ನಾನು ನಡೆದುಕೊಂಡು ಹೋಗಿದ್ದೆ. ಆಗ ಅಬ್ದುಲ್ ಅಝೀಝ್ ಅವರ ಅಪಘಾತ ಸುದ್ದಿ ತಿಳಿಯಿತು. ಅವರು ನನ್ನೊಂದಿಗೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪಘಾತವಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸುದ್ದಿ ಎಂದು ಸ್ವತಃ ಶಿಹಾಬ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.