ಸಂವಿಧಾನಕ್ಕೆ ತಿಲಾಂಜಲಿ ಇಟ್ಟ ಆರ್ ಎಸ್ ಎಸ್ ಬೆಂಬಲಿತ ಬಿಜೆಪಿ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ

Prasthutha|


ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಗಾಂಧಿ ಕುಟುಂಬ ಹಿಂದೆ ಸರಿದು, ಬೇರೆಯವರಿಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಆರಂಭದಲ್ಲಿ ನನಗೆ ಈ ಚುನಾವಣೆ ಬಗ್ಗೆ ಆಸಕ್ತಿ ಇಲ್ಲದಿದ್ದರೂ ರಾಜ್ಯ ಪ್ರಮುಖ ನಾಯಕರು, ರಾಷ್ಟ್ರ ಹಾಗೂ ಬೇರೆ ರಾಜ್ಯದ ನಾಯಕರ ಸಲಹೆ ಮೇರೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ  ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

- Advertisement -


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಸದಸ್ಯತ್ವದಿಂದ, ಬ್ಲಾಕ್, ಜಿಲ್ಲಾ ಮಟ್ಟದ ಸಮಿತಿಯಿಂದ ಕೆಪಿಸಿಸಿ ಅಧ್ಯಕ್ಷನಾಗಿ, ಶಾಸಕ, ಮಂತ್ರಿಯಿಂದ ಸಿಎಲ್ ಪಿ ನಾಯಕನಾಗಿ ಕೆಲಸ ಮಾಡಿದ ನನ್ನ ರಾಜಕೀಯ ಜೀವನ ಕರ್ನಾಟಕದಿಂದಲೇ ಆರಂಭವಾಗಿದೆ. ನಮ್ಮಲ್ಲಿ ಯಾವುದೇ ಬಣ ಇಲ್ಲ. ನಾವೆಲ್ಲರೂ ಸಮಾನರು. ಒಗ್ಗಟ್ಟಿದ್ದರೆ ನಮ್ಮ ಸರ್ಕಾರ ಬರುವುದು ಖಚಿತ ‘ ಎಂದು ತಿಳಿಸಿದರು.


ಇಂದು ದೇಶದಲ್ಲಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಬೆಂಬಲಿತ ಸರ್ಕಾರ ಸಂವಿಧಾನಕ್ಕೆ ತಿಲಾಂಜಲಿ ಕೊಟ್ಟಿದ್ದು, ಸಂವಿಧಾನ ರೀತಿ ನಡೆದುಕೊಳ್ಳುತ್ತಿಲ್ಲ. ಐಟಿ ಇಡಿ ಮೂಲಕ ಚುನಾಯಿತ ಸರ್ಕಾರವನ್ನು ಕೆಡವುತ್ತಿದ್ದಾರೆ. ಅವರ ಪಕ್ಷ ಸೇರಲು ಒಪ್ಪದಿದ್ದರೆ ಕೇಸ್ ಮುಂದುವರಿಸುತ್ತಾರೆ. ಇಲ್ಲಿ ಕಳಂಕಿತರು ಅಲ್ಲಿ ಹೋಗಿ ಕ್ಲೀನ್ ಆಗುತ್ತಾರೆ ಎಂದು ಟೀಕಿಸಿದರು.

- Advertisement -


ದೇಶದ 6-7 ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಕೆಡವಲಾಗಿದೆ. ಇನ್ನು ದೇಶದಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ಇದೆಲ್ಲವನ್ನೂ ಎದುರಿಸಲು ಕಾಂಗ್ರೆಸ್ ಶಕ್ತಿಶಾಲಿಯಾಗಬೇಕು. ಕಳೆದ 55 ವರ್ಷಗಳಿಂದ ನೀವು ಪಕ್ಷವನ್ನು ಸಂಘಟಿಸುತ್ತಿದ್ದು, ನೀವು ಸ್ಪರ್ಧಿಸಬೇಕು ಎಂದು ಹಲವು ನಾಯಕರು ನನಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ರಾಜ್ಯ ನಾಯಕರು ನನಗೆ ಬೆಂಬಲ ನೀಡುವುದರಲ್ಲಿ ಸಂಶಯವಿಲ್ಲ. ಆದರೆ ನನ್ನ ಕರ್ತವ್ಯ ಹಿನ್ನೆಲೆಯಲ್ಲಿ ನಾನು ಎಲ್ಲರಿಗೂ ಬೆಂಬಲ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

Join Whatsapp