ಮಹಾರಾಷ್ಟ್ರ: ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಲ್ಲಿ 15,000 ಕ್ಕೂ ಹೆಚ್ಚು ಬಾಲ್ಯ ವಿವಾಹಗಳು; 6000 ಕ್ಕೂ ಮಿಕ್ಕ ಸಾವು

Prasthutha|

ಮುಂಬೈ: ಮಹಾರಾಷ್ಟ್ರದ 16 ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ 15,253 ಬಾಲ್ಯ ವಿವಾಹ ಪ್ರಕರಣಗಳು ಮತ್ತು 6,582 ಸಾವುಗಳು ವರದಿಯಾಗಿವೆ. ವಕೀಲ ಅಶುತೋಷ್ ಕುಂಭಕೋಣಿ ಅವರು ಬಾಂಬೆ ಹೈಕೋರ್ಟ್ ಗೆ  ಸಲ್ಲಿಸಿದ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

- Advertisement -

ಮಹಾರಾಷ್ಟ್ರದ ಮೆಲ್ಘಾಟ್ ನ ಬುಡಕಟ್ಟು ಜಿಲ್ಲೆಗಳಲ್ಲಿ ಅಪೌಷ್ಟಿಕತೆಯಿಂದ ಸಾವುಗಳು ಹೆಚ್ಚುತ್ತಿವೆ ಎಂದು ಆರೋಪಿಸಿ ಜನರ ಗುಂಪೊಂದು ಬಾಂಬೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿದ್ದರು. ಈ ಸಂಬಂಧ ಹೈಕೋರ್ಟ್ ನಲ್ಲಿ ನಡೆದ ವಾದ-ಪ್ರತಿವಾದಗಳ ವೇಳೆ, ಅಪೌಷ್ಟಿಕತೆಯಿಂದ ಉಂಟಾಗುವ ಸಾವುಗಳ ಹೆಚ್ಚಳಕ್ಕೆ ಬಾಲ್ಯವಿವಾಹವೇ ಕಾರಣ ಎಂಬ  ಆರೋಪವುಂಟಾಗಿತ್ತು.

ಬಾಲ್ಯವಿವಾಹಗಳ ಹೆಚ್ಚಳಕ್ಕೆ ಕಾರಣಗಳನ್ನು ಕಂಡುಹಿಡಿಯಲು ಮಹಾರಾಷ್ಟ್ರದ 16 ಬುಡಕಟ್ಟು ಜಿಲ್ಲೆಗಳಿಗೆ ಭೇಟಿ ನೀಡುವಂತೆ ನ್ಯಾಯಾಲಯವು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತು. ಹೈಕೋರ್ಟ್ ನಿರ್ದೇಶನದ ಮೇರೆಗೆ ಮಹಾರಾಷ್ಟ್ರ ಸರ್ಕಾರ ನೇಮಿಸಿದ ತಂಡವು ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

- Advertisement -

ಈ ವರದಿಯ ಪ್ರಕಾರ, 2019 ಮತ್ತು 2022 ರ ನಡುವೆ, 16 ಜಿಲ್ಲೆಗಳಲ್ಲಿ ಅಪೌಷ್ಟಿಕತೆಯಿಂದ 6,582 ಶಿಶು ಸಾವುಗಳು ವರದಿಯಾಗಿವೆ. ಈ ಪೈಕಿ 601 ಪ್ರಕರಣಗಳಲ್ಲಿ, ತಾಯಂದಿರು ಬಾಲ್ಯವಿವಾಹಕ್ಕೆ ಬಲಿಪಶುಗಳಾಗಿರುವುದು ಕಂಡುಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಅಪೌಷ್ಟಿಕತೆಯಿಂದ ಸಾವನ್ನಪ್ಪಿದ ಒಟ್ಟು ಮಕ್ಕಳಲ್ಲಿ 5,031 ಮಕ್ಕಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ವರದಿಯ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ 26,059 ತೀವ್ರ ಅಪೌಷ್ಟಿಕತೆಯ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 20,293 ಪ್ರಕರಣಗಳು ಪರಿಶಿಷ್ಟ ಪಂಗಡಕ್ಕೆ ಸೇರಿವೆ. ತೀವ್ರ ಅಪೌಷ್ಟಿಕತೆಯ 3,000 ಪ್ರಕರಣಗಳಲ್ಲಿ, ಮಕ್ಕಳ ತಾಯಂದಿರು ಅಪ್ರಾಪ್ತ ವಯಸ್ಕರಾಗಿದ್ದಾರೆ.

ಅಂಕಿಅಂಶಗಳು ಆಶ್ಚರ್ಯಕರವಾಗಿವೆ ಎಂದು ಗಮನಿಸಿದ ನ್ಯಾಯಾಲಯವು ಬುಡಕಟ್ಟು ಸಮುದಾಯಗಳಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹಗಳು ಮತ್ತು ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಉಪಕ್ರಮವನ್ನು ತೆಗೆದುಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವಿವರವಾದ ವಿಚಾರಣೆಗಾಗಿ ನ್ಯಾಯಾಲಯವು ಪ್ರಕರಣವನ್ನು ಜೂನ್ 20ಕ್ಕೆ ಮುಂದೂಡಿದೆ.

Join Whatsapp