ಮುಂಬೈ: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ 85 ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ 22 ಸ್ಥಾನಗಳನ್ನು ಬಿಜೆಪಿ ಗೆಲುವು ಸಾಧಿಸಿದೆ. ಅದೇ ರೀತಿ 144 ಪಂಚಾಯತ್ ಸಮಿತಿಯಲ್ಲಿ 36 ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಮಹಾರಾಷ್ಟ್ರದಾದ್ಯಂತ 6 ಜಿಲ್ಲಾ ಪರಿಷತ್ ನಲ್ಲಿ ಖಾಲಿ ಇರುವ 84 ಸ್ಥಾನ, 37 ಪಂಚಾಯತ್ ಸಮಿತಿಯ 141 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿತ್ತು.
ಈ ಮಧ್ಯೆ ಒಂದು ಜಿಲ್ಲಾ ಪರಿಷತ್ ನಲ್ಲಿ 85 ಮತ್ತು ಮೂರು ಪಂಚಾಯತ್ ಸಮಿತಿ ವಾರ್ಡ್ ಗಳಲ್ಲಿ 144 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. 6 ಜಿಲ್ಲಾ ಪರಿಷತ್ ಗಳ ಪೈಕಿ 85 ಸ್ಥಾನಗಳಲ್ಲಿ ಬಿಜೆಪಿ 22 ಸೀಟ್ ಮತ್ತು ಕಾಂಗ್ರೆಸ್, ಎನ್.ಸಿ.ಪಿ, ಶಿವಸೇನೆ ಕ್ರಮವಾಗಿ 19, 15, 12 ಸ್ಥಾನಗಳನ್ನು ಪಡೆದಿದೆ. ಮಾತ್ರವಲ್ಲ ಸಿಪಿಐ (ಎಂ), ಇತರರು 12 ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪಂಚಾಯತ್ ಸಮಿತಿ ಉಪಚುನಾವಣೆಯಲ್ಲಿ 144 ಸ್ಥಾನಗಳ ಪೈಕಿ ಕಾಂಗ್ರೆಸ್ ಅತೀ ಹೆಚ್ಚು ಅಂದರೆ 36 ಸ್ಥಾನಗಳನ್ನು ಗೆದ್ದಿದೆ. ಇಲ್ಲಿ ಬಿಜೆಪಿ 33, ಶಿವಸೇನೆ 23, ಮತ್ತು ಎನ್.ಸಿ.ಪಿ 18 ಸ್ಥಾನಗಳನ್ನು ಪಡೆದುಕೊಂಡಿದೆ. ಸ್ವತಂತ್ರರು 7, ಮಹಾರಾಷ್ಟ್ರ ನವನಿರ್ಮಾಣ ಸೇನೆ 1 ಮತ್ತು ಇತರ ಪಕ್ಷಗಳು 26 ಸ್ಥಾನಗಳನ್ನು ತಮ್ಮ ತೆಕ್ಕೆಗೆ ಹಾಕಿದೆ.
ಇನ್ನೊಂದು ಬದಿಯಲ್ಲಿ ಬಿಜೆಪಿಯ ಸ್ಥಾನಗಳ ಸಂಖ್ಯೆ 31 ರಿಂದ 22 ಕ್ಕೆ ಇಳಿದಿದ್ದರೆ, ವಂಚಿತ್ ಬಹುಜನ ಅಘಾಡಿಯವರ ಸಂಖ್ಯೆ 12 ರಿಂದ 8 ಕ್ಕೆ ಇಳಿದಿದೆ ಎಂದು ಶ್ರೀ ಪ್ರಥ್ವಿರಾಜ್ ಚವಾಣ್ ಹೇಳಿದರು.