ಟಾಪ್-5 ಟಿ-20 ಕ್ರಿಕೆಟಿಗರನ್ನು ಹೆಸರಿಸಿದ ಪೊಲಾರ್ಡ್ : ಪೊಲಾರ್ಡ್ ಪಟ್ಟಿಯಲ್ಲಿ ಓರ್ವ ಭಾರತೀಯ..!

Prasthutha|

- Advertisement -

ದುಬೈ; ಐಪಿಎಲ್ ಟೂರ್ನಿ ಮುಗಿದ ಬಳಿಕ ಅಕ್ಟೋಬರ್ 17ರಿಂದ ಯುಎಇಯಲ್ಲಿ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯು ಆರಂಭವಾಗಲಿದೆ.ಚುಟುಕು ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸುತ್ತಿರುವ ದೈತ್ಯ ಆಲ್ ರೌಂಡರ್ ಕೀರಾನ್ ಪೊಲಾರ್ಡ್ ಸರ್ವಶ್ರೇಷ್ಠ ಟಿ-20 ಟಾಪ್ 5 ಆಟಗಾರರನ್ನು ಹೆಸರಿಸಿದ್ದು, ಪೊಲಾರ್ಡ್ ಪಟ್ಟಿಯಲ್ಲಿ ಓರ್ವ ಭಾರತೀಯನಿಗೆ ಸ್ಥಾನ ನೀಡಿದ್ದಾರೆ.
ಐಸಿಸಿ ವೆಬ್‌ಸೈಟ್ ಗೆ ನೀಡಿದ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುವ ವೇಳೆ ಐವರು ಸರ್ವಶ್ರೇಷ್ಠ ಆಟಗಾರರನ್ನು ಪೊಲಾರ್ಡ್ ಪಟ್ಟಿ ಮಾಡಿದ್ದಾರೆ.
ಪೊಲಾರ್ಡ್​ ಆಯ್ಕೆ ಮಾಡಿರುವ ಟಾಪ್-5 ಟಿ-20 ಪ್ಲೇಯರ್ಸ್​ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಥಾನ ಪಡೆದಿದ್ದಾರೆ.
ಪೊಲಾರ್ಡ್‌ ಟಾಪ್ -5 ಟಿ 20 ಕ್ರಿಕೆಟಿಗರ ಪಟ್ಟಿಯಲ್ಲಿ ಕ್ರಿಸ್ ಗೇಲ್​ಗೆ ಅಗ್ರಸ್ಥಾನ ನೀಡಿದ್ದಾರೆ. ‘ಯೂನಿವರ್ಸ್ ಬಾಸ್’ ಗೇಲ್ 74 ಟಿ- 20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 1854 ರನ್ ಗಳಿಸಿದ್ದಾರೆ. ಇನ್ನು ಫ್ರ್ಯಾಂಚೈಸ್ ಕ್ರಿಕೆಟ್ ಲೀಗ್​ನ ಟಿ20 ಗಳಲ್ಲಿ 448 ಪಂದ್ಯಗಳಲ್ಲಿ 14,276 ರನ್ ಗಳಿಸಿದ್ದಾರೆ.
ಶ್ರೀಲಂಕಾದ ದಂತಕಥೆ ಮಾಲಿಂಗ ಟಾಪ್-5 ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಮಾಲಿಂಗ 84 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 107 ವಿಕೆಟ್ ಪಡೆದಿದ್ದಾರೆ.

3ನೇ ಆಟಗಾರನಾಗಿ ವೆಸ್ಟ್ ಇಂಡೀಸ್​ನ ಸ್ಪಿನ್ನರ್ ಸುನಿಲ್ ನರೈನ್’ಗೆ ಸ್ಥಾನ‌ ನೀಡಲಾಗಿದೆ. ಮಿಸ್ಟರಿ ಸ್ಪಿನ್ನರ್ ನರೈನ್ ಒಟ್ಟು 379 ಟಿ-20 ಪಂದ್ಯಗಳಲ್ಲಿ 419 ವಿಕೆಟ್ ಪಡೆದಿದ್ದಾರೆ.
ವಿಕೆಟ್ ಕೀಪರ್‌ ಆಗಿ ಎಂಎಸ್ ಧೋನಿ ಅವರನ್ನು ಪೊಲಾರ್ಡ್​ ಆಯ್ಕೆ ಮಾಡಿದ್ದಾರೆ, ವಿಶ್ವದ ಅತ್ಯುತ್ತಮ ಫಿನಿಶರ್‌ಗಳಲ್ಲಿ ಒಬ್ಬರಾಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ 344 ಪಂದ್ಯಗಳಲ್ಲಿ 6905 ರನ್ ಗಳಿಸಿದ್ದಾರೆ.
ಕೊನೇಯದಾಗಿ ಐದನೇ ಸ್ಥಾನಕ್ಕೆ ತಮ್ಮನ್ನೇ ಪೊಲಾರ್ಡ್ ಆಯ್ಕೆ ಮಾಡಿಕೊಂಡಿದ್ದಾರೆ. ಯಶಸ್ವೀ ಆಲ್​ರೌಂಡರ್ ಆಗಿರುವ ಪೊಲಾರ್ಡ್ ಟಿ-20 ಕ್ರಿಕೆಟ್ ನಲ್ಲಿ ಇದುವರೆಗೂ11,223 ರನ್ ಗಳಿಸಿದ್ದಾರೆ. ಜೊತೆಗೆ 300 ವಿಕೆಟ್ ಕಬಳಿಸಿದ್ದಾರೆ.

Join Whatsapp