ಭೋಪಾಲ್ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹದ ವೇಳೆ ಉಜ್ಜೈನಿ, ಇಂಧೋರ್ ಮತ್ತು ಮಂಡ್ಸೌರ್ ನಲ್ಲಿ ನಡೆದ ಕೋಮು ಸಂರ್ಘರ್ಷಗಳನ್ನು ನಿಯಂತ್ರಿಸಲು ನಿರ್ಲಕ್ಷ್ಯ ತೋರಿದ ಬಗ್ಗೆ ಪ್ರತಿಕ್ರಿಯಿಸುವಂತೆ ರಾಜ್ಯ ಸರಕಾರಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಇಂಧೋರ್ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿದೆ.
ರಾಜ್ಯಸಭಾ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ವಿಚಾರಣೆ ನಡೆಸುತ್ತಿರುವ ಸಿಜೆ ಮುಹಮ್ಮದ್ ರಫೀಕ್ ಮತ್ತು ನ್ಯಾ. ಸುಜೊಯ್ ಪಾಲ್ ನ್ಯಾಯಪೀಠ ಈ ನೋಟಿಸ್ ಜಾರಿಗೊಳಿಸಿದೆ. ಕೋಮು ಹಿಂಸಾಚಾರ, ಗುಂಪು ಗಲಭೆ, ಗುಂಪು ಹತ್ಯೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸುವಂತೆ ಸರಕಾರಕ್ಕೆ ನಿರ್ದೇಶಿಸಲು ಅರ್ಜಿಯಲ್ಲಿ ಕೋರಲಾಗಿದೆ.
ನೋಟಿಸ್ ಗೆ ಪ್ರತಿಕ್ರಿಯಿಸಲು ಹೆಚ್ಚುವರಿ ಅಡ್ವೊಕೇಟ್ ಜನರಲ್ ಪುಷ್ಯಮಿತ್ರ ಭಾರ್ಗವ್ ಗೆ ಕೋರ್ಟ್ ಆರು ವಾರಗಳ ಕಾಲವಕಾಶ ನೀಡಿತ್ತು. ಕಳೆದ ವರ್ಷ ಡಿಸೆಂಬರ್ ನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಕೆಲವು ಗುಂಪುಗಳು ಕೋಮು ಘರ್ಷಣೆಗಳನ್ನು ನಡೆಸಿದ್ದವು.