► ಸಚಿವರ ವಿರುದ್ಧದ ಗಲಭೆ ಪ್ರಕರಣವೂ ವಾಪಸ್ !
ಕಾನೂನು ಇಲಾಖೆಯ ಸಲಹೆಯನ್ನು ಅವಗಣಿಸಿ ಕರ್ನಾಟಕ ಸರ್ಕಾರ ಹಿಂಪಡೆದಿರುವ 62 ಪ್ರಕರಣಗಳಲ್ಲಿ ಕಾನೂನು ಸಚಿವ ಮಾಧುಸ್ವಾಮಿಯವರ ಪ್ರಕರಣವೂ ಸೇರಿರುವುದು ಗಮನಾರ್ಹವಾಗಿದೆ. ಡಿಜಿಪಿ, ಐಜಿಪಿ ಮತ್ತು ಕಾನೂನು ಇಲಾಖೆಗಳು ಕೆಲವು ಪ್ರಕರಣಗಳನ್ನು ವಾಪಸ್ ಪಡೆಯಬಾರದೆಂದು ಸಲಹೆ ನೀಡಿದ್ದರೂ, ಕರ್ನಾಟಕದ ಬಿಜೆಪಿ ಸರ್ಕಾರವು ಬಿಜೆಪಿ ಮತ್ತು ಸಂಘಪರಿವಾರದ ಹಲವು ನಾಯಕರುಗಳ ಪ್ರಕರಣಗಳು ಸೇರಿದಂತೆ ಒಟ್ಟು 62 ಪ್ರಕರಣಗಳನ್ನು ವಾಪಸ್ ಪಡೆದಿತ್ತು. ಇದು ಕ್ರಿಮಿನಲ್ ಗಳ ವಿರುದ್ಧದ ರಾಜ್ಯ ಸರ್ಕಾರದ ನಿಲುವಿನ ನೈತಿಕತೆಯನ್ನೇ ಪ್ರಶ್ನಿಸುವಂತೆ ಮಾಡಿತ್ತು.
2015 ನವಂಬರ್ ನಲ್ಲಿ ಹುಣಸೂರಿನಲ್ಲಿ ಎರಡು ಗುಂಪುಗಳ ಮಧ್ಯೆ ನಡೆದಿದ್ದ ಗಲಭೆಯಲ್ಲಿ ಇರುವ ಪಾತ್ರಕ್ಕೆ ಸಂಬಂಧಿಸಿ ಹಾಲಿ ಕಾನೂನು ಸಚಿವರಾಗಿರುವ ಮಾಧುಸ್ವಾಮಿ ಹಾಗೂ ಸಿಟಿ ರವಿಯವರ ವಿರುದ್ಧ ಐಪಿಸಿ ಸೆಕ್ಷನ್ 143 ಅಡಿಯಲ್ಲಿ ಅಕ್ರಮ ಕೂಟ ಸೇರಿದ ಹಾಗೂ ಐಪಿಸಿ ಸೆಕ್ಷನ್ 147 ಅಡಿಯಲ್ಲಿ ಗಲಭೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಇದೀಗ ಯಡಿಯೂರಪ್ಪ ಸರ್ಕಾರ ವಾಪಸ್ ಪಡೆದ 62 ಪ್ರಕರಣಗಳಲ್ಲಿ ಇವರೀರ್ವರ ಮೇಲೆ ದಾಖಲಾಗಿದ್ದ ಹುಣಸೂರಿನ ಪ್ರಕರಣವೂ ಸೇರಿದೆ.
ಕಾನೂನು ಸಚಿವ ಮಾಧುಸ್ವಾಮಿಯವರಲ್ಲಿ ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು, “ಇದೊಂದು ‘ವಾಡಿಕೆಯ ಕ್ರಮ’ವಾಗಿದ್ದು, ಈ ಹಿಂದೆಯೂ ನಾವು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಾಯಕರ ಪ್ರಕರಣಗಳನ್ನೂ ಹಿಂಪಡೆದಿದ್ದೇವೆ” ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕ್ರಿಮಿನಲ್ ಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುವುದು ಯಾವಾಗಿನಿಂದ ಒಂದು ‘ವಾಡಿಕೆಯ ಕ್ರಮ’ವಾಗಿದೆ ಮತ್ತು ಅದನ್ನು ಒಂದು ಸಾಮಾನ್ಯ ಪ್ರಕ್ರಿಯೆಯಾಗಿ ಪರಿಗಣಿಸಲಾಗಿದೆ ಎಂದು ಸರ್ಕಾರವೇ ಉತ್ತರಿಸಬೇಕಾಗಿದೆ.
“ಜನರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹಾಗೂ ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಆಡಳಿತದ ವಿರುದ್ಧ ನಡೆಸಿರುವ ಪ್ರತಿಭಟನೆಗಳು ಶಾಂತಿ ಕದಡುವ ಹಂತಕ್ಕೆ ತಲುಪಿದಾಗ ಪೊಲೀಸರು ದಾಖಲಿಸಿರುವ ಸ್ವಯಂ ಪ್ರೇರಿತ ಪ್ರಕರಣಗಳನ್ನು ವಾಪಸ್ ಪಡೆದಿದ್ದೇವೆ” ಎಂದು ಕಾನೂನು ಸಚಿವರು ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ತನ್ನ ಹಾಗೂ ಸಿಟಿ ರವಿಯವರ ಮೇಲೆ ದಾಖಲಾಗಿರುವ ಗಲಭೆ ಪ್ರಕರಣಗಳನ್ನು ‘ಸಾರ್ವಜನಿಕ ಹಿತಾಸಕ್ತಿಯ’ ಪಟ್ಟಿಗೆ ಸೇರಿಸುವ ಪ್ರಯತ್ನವನ್ನೂ ಅವರು ಮಾಡಿದ್ದಾರೆ.