ದೆಹಲಿ ಗಲಭೆ ಪ್ರಕರಣ | ಜೆಎನ್ ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ಗೆ ಅ.1ರ ವರೆಗೆ ನ್ಯಾಯಾಂಗ ಬಂಧನ

Prasthutha|

ನವದೆಹಲಿ : ಕಳೆದ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಜೆಎನ್ ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ಅವರಿಗೆ ಅ.1ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ದೆಹಲಿ ನ್ಯಾಯಾಲಯವೊಂದು ಈ ತೀರ್ಪು ನೀಡಿದೆ.
ಇಮಾಮ್ ದೆಹಲಿ ಪೊಲೀಸರಿಂದ ಆ.25ಕ್ಕೆ ಬಂಧಿತರಾಗಿದ್ದರು. ಅವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ (ಯುಎಪಿಎ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಫೆಬ್ರವರಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ, ಸಂಭವಿಸಿದ್ದ ದೆಹಲಿ ಗಲಭೆಗೆ ಸಂಬಂಧಿಸಿ ಸಂಚು ರೂಪಿಸಿದ್ದರು ಎಂದು ಅವರ ವಿರುದ್ಧ ಆರೋಪ ದಾಖಲಾಗಿದೆ.

ಪ್ರಕರಣದ ತನಿಖಾ ಲಕ್ಷಣ ಮತ್ತು ದಾಖಲೆಗಳನ್ನು ಪರಿಗಣಿಸಿ, ಇಮಾಮ್ ಗೆ ಅ.1ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಕೋರ್ಟ್ ತಿಳಿಸಿದೆ. ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಈ ಆದೇಶ ನೀಡಿದ್ದಾರೆ.

- Advertisement -

ಇಮಾಮ್ ಅವರನ್ನು 30 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಎಂದು ಪೊಲೀಸರು ಅರ್ಜಿ ದಾಖಲಿಸಿದ್ದರು. ಈ ಹಿಂದೆ ಕೋರ್ಟ್ ಇಮಾಮ್ ರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಕಳೆದ ಡಿಸೆಂಬರ್ ನಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಸಿಎಎ ವಿರೋಧಿ ಹೋರಾಟದ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಇಮಾಮ್ ಜ.28ರಂದು ಬಂಧಿತರಾಗಿದ್ದರು.

ಇನ್ನೊಂದೆಡೆ, ಆಲಿಗಢ್ ಕೋರ್ಟ್ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿ ಶರ್ಜೀಲ್ ಉಸ್ಮಾನಿಗೆ ಜಾಮೀನು ಮಂಜೂರು ಮಾಡಿದೆ. ಶರ್ಜೀಲ್ ಉಸ್ಮಾನಿ ಅವರ ಶೈಕ್ಷಣಿಕ ದಾಖಲೆ ಮತ್ತು ಪ್ರಕರಣದ ಇತರ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರಾಗಿರುವುದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ಕೋರ್ಟ್ ತಿಳಿಸಿದೆ. ಜಾಮೀನು ಪಡೆದ ಸಿಎಎ ವಿರೋಧಿ ಹೋರಾಟಗಾರ ಶರ್ಜಿಲ್ ಉಸ್ಮಾನಿ ಆಲಿಗಢ ಮುಸ್ಲಿಂ ವಿವಿ ವಿದ್ಯಾರ್ಥಿಯಾಗಿದ್ದು, ಜಾಮೀನು ನಿರಾಕರಿಸಲ್ಪಟ್ಟ ಶರ್ಜೀಲ್ ಇಮಾಮ್ ಜೆಎನ್ ಯು ವಿದ್ಯಾರ್ಥಿ.

- Advertisement -