►ಭಾರತೀಯ ಆಹಾರ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗೆ ಲುಲು ಗ್ರೂಪ್ ಯೋಜನೆ
ಹೊಸದಿಲ್ಲಿ: ಲುಲು ಗ್ರೂಪ್ ಚೇರ್ಮೆನ್ ಎಂಎ ಯೂಸುಫಲಿ ಇಂದು ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿಯಾಗಿದ್ದಾರೆ.
ಭಾರತದಲ್ಲಿ ಆಹಾರ ಮತ್ತು ಸಂಸ್ಕರಣೆ ಚಿಲ್ಲರೆ ವ್ಯಾಪಾರದಲ್ಲಿ ಹೆಚ್ಚು ಗಮನಹರಿಸಲು ಲುಲು ಗ್ರೂಪ್ ಉದ್ದೇಶಿಸಿದೆ ಎಂದು ಯೂಸುಫಲಿ ಈ ವೇಳೆ ಹೇಳಿದ್ದಾರೆ.
ಭಾರತದಲ್ಲಿ ಲುಲು ಗ್ರೂಪ್ ನ ಭವಿಷ್ಯದ ಯೋಜನೆಗಳ ಬಗ್ಗೆ ಯೂಸುಫ್ ಅಲಿ ಪ್ರಧಾನಿಗೆ ಮಾಹಿತಿ ನೀಡಿದರು. ಲಕ್ನೋ ಮತ್ತು ತಿರುವನಂತಪುರಂನಲ್ಲಿನ ಶಾಪಿಂಗ್ ಮಾಲ್‌ಗಳು ಈ ವರ್ಷದ ಅಂತ್ಯದ ವೇಳೆಗೆ ಕಾರ್ಯಾರಂಭಗೊಳ್ಳಲಿದೆ.
ಲುಲು ಗ್ರೂಪ್ ಈ ಕ್ಷೇತ್ರದಲ್ಲಿ 5,000 ಕೋಟಿ ರೂ. ಹೂಡಿಕೆ ಮಾಡಿದೆ. ಈ ಮೂಲಕ ಹೆಚ್ಚಿನ ಜನರಿಗೆ ಉದ್ಯೋಗ ಪಡೆಯಲು ಸಾಧ್ಯವಾಗಿದೆ ಎಂದು ಯೂಸುಫಲಿ ಪ್ರಧಾನಿಗೆ ತಿಳಿಸಿದರು.
ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಲುಲು ಗ್ರೂಪ್ ವಿವಿಧ ರಾಜ್ಯಗಳಿಗೆ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ. ಕಾಶ್ಮೀರದಿಂದ ಹೆಚ್ಚು ಆಹಾರ ರಫ್ತು ಮಾಡಲಾಗುವುದು ಎಂದು ಯೂಸುಫ್ ಅಲಿ ಮೋದಿಗೆ ಹೇಳಿದರು.
ಕೊಲ್ಲಿ ರಾಷ್ಟ್ರಗಳಲ್ಲಿ ಕಾಶ್ಮೀರ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ. ಗುಜರಾತ್ ನಲ್ಲಿ ಹೊಸ ಆಹಾರ ಸಂಸ್ಕರಣಾ ಕೇಂದ್ರ ಮತ್ತು ಹೈಪರ್ ಮಾರ್ಕೆಟ್ ಸ್ಥಾಪಿಸಲು ಮಾತುಕತೆ ನಡೆಯುತ್ತಿದೆ.
ಲುಲು ಸಮೂಹವು ಭಾರತದಲ್ಲಿ ಉತ್ತಮ ಕಾರ್ಯಚಟುವಟಿಕೆ ನಡೆಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದರು.