ಪ್ರವಾದಿ ವಿರುದ್ಧ ಕೀಳುಮಟ್ಟದ ಹೇಳಿಕೆ: ಗಲ್ಫ್ ರಾಷ್ಟ್ರಗಳಲ್ಲಿ ಮುಂದುವರಿದ ಆಕ್ರೋಶ

Prasthutha|

►► ಪ್ರವಾದಿ ನಿಂದನೆಗೆ ಒಐಸಿ, ತಾಲಿಬಾನ್ ಸರ್ಕಾರ ಕೆಂಡ

- Advertisement -

ನವದೆಹಲಿ: ಪ್ರವಾದಿ ಮುಹಮ್ಮದ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಅಮಾನತು ಮತ್ತು ಉಚ್ಚಾಟನೆಗೊಂಡಿರುವ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಕೀಳು ಹೇಳಿಕೆಗೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಕೂಡ ಕೆಂಡಕಾರಿದೆ. ಸೌದಿ ಅರೇಬಿಯಾ ಕೇಂದ್ರಿತ ಒಐಸಿ- ಇಸ್ಲಾಮಿಕ್ ಸಹಕಾರ ಒಕ್ಕೂಟವು ಭಾರತದ ಕೆಲವರ ಹೇಳಿಕೆಯು ಅನಗತ್ಯದ್ದು ಮತ್ತು ಸಣ್ಣ ಮನಸ್ಸಿನದ್ದು ಎಂದು ಹೇಳಿದೆ. ಭಾರತದವರು ಸಣ್ಣ ಮನಸ್ಸಿನವರು ಎಂಬ ಮಾದರಿಯ ಒಐಸಿ ಹೇಳಿಕೆಯನ್ನು ಭಾರತವು ಅಲ್ಲಗಳೆದಿದೆ.


ಪಾಕಿಸ್ತಾನದಲ್ಲೂ ಪ್ರವಾದಿ ವಿರುದ್ಧದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬಹರೇನ್ ಕೂಡ ಬಿಜೆಪಿಯವರ ಹೇಳಿಕೆಯನ್ನು ಖಂಡಿಸಿದ್ದು, ಹೇಳಿಕೆ ನೀಡಿದವರ ವಿರುದ್ಧ ಕ್ರಮ ತೆಗೆದುಕೊಂಡಿರುವುದನ್ನು ಸ್ವಾಗತಿಸಿದೆ. 57 ದೇಶಗಳನ್ನು ಸದಸ್ಯರಾಗಿ ಹೊಂದಿರುವ ಜೆದ್ದಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಒಐಸಿ ತೀವ್ರವಾಗಿ ಭಾರತದ ಆಳುವ ಪಕ್ಷದವರ ಪ್ರವಾದಿ ವಿರೋಧಿ ಹೇಳಿಕೆಯನ್ನು ಖಂಡಿಸಿದೆ.

- Advertisement -


“ಭಾರತದಲ್ಲಿ ಕ್ರಮಬದ್ಧವಾಗಿ ಮುಸ್ಲಿಮರನ್ನು ಮಿತಗೊಳಪಡಿಸುವ ನಿಟ್ಟಿನಲ್ಲಿ ಆಳುವ ಪಕ್ಷದವರ ಇಸ್ಲಾಂ ಕೀಳುಗೊಳಿಸುವ ಹೇಳಿಕೆ ಬಂದಿದೆ. ಭಾರತದಲ್ಲಿ ಈ ಶಕ್ತಿಗಳು ಮುಸ್ಲಿಮರ ವಿದ್ಯಾಲಯ ಮತ್ತು ಆರಾಧನಾಲಯಗಳನ್ನು ನಾಶ ಮಾಡುತ್ತಲಿವೆ. ಶಿರ ವಸ್ತ್ರ ಧರಿಸುವುದನ್ನು ನಿಷೇಧಿಸುತ್ತಿವೆ. ಅಲ್ಲದೆ ಮುಸ್ಲಿಮರ ವಿರುದ್ಧ ಹಿಂಸೆಯೂ ಹೆಚ್ಚಾಗಿದೆ” ಎಂದು ಒಐಸಿ ಖಂಡನಾ ಹೇಳಿಕೆ ಬಿಡುಗಡೆ ಮಾಡಿದೆ. ಒಐಸಿಯ ಪ್ರಧಾನ ಕಾರ್ಯದರ್ಶಿಯವರ ಹೇಳಿಕೆ ಗಮನಿಸಿದ್ದೇವೆ. ಅವರ ಸಣ್ಣ ಮನಸ್ಸಿನವರು ಎಂಬ ಹೇಳಿಕೆಯನ್ನು ತಿರಸ್ಕರಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗ್ಚಿ ಪ್ರತಿ ಹೇಳಿಕೆ ನೀಡಿದ್ದಾರೆ.


ಭಾರತವು ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಕೆಲವರ ಹೇಳಿಕೆಗಳು ಸರಕಾರದ್ದಾಗಲೀ, ಸಾರ್ವಜನಿಕವಾದದ್ದಾಗಲೀ ಅಲ್ಲ ಎಂದು ಸರಣಿ ಟ್ವೀಟ್ ಮಾಡಿದ್ದಾಗಿಯೂ ಅವರು ಹೇಳಿದರು. ಒಐಸಿ ಇಂಥ ಕೋಮು ಹೇಳಿಕೆ ನೀಡದಿರಲಿ, ಎಲ್ಲ ಧರ್ಮಗಳನ್ನು ಗೌರವಿಸಲಿ ಎಂದು ಒಐಸಿ ಪ್ರಧಾನ ಕಾರ್ಯದರ್ಶಿಗೆ ಟ್ವೀಟ್ ಮಾಡಿರುವುದಾಗಿ ಸಹ ಬಗ್ಚಿ ಹೇಳಿದರು. ಬಿಜಪಿ ಪರವಾದವರ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಮತ್ತು ಪ್ರಚೋದನಾತ್ಮಕ ಎಂದೂ ಪಾಕಿಸ್ತಾನಿಗರು ಟ್ವೀಟಿಸಿದ್ದಾರೆ. ಹೇಳಿಕೆ ನೀಡಿದ ವಕ್ತಾರರ ಮೇಲೆ ಬಿಜೆಪಿಯು ಒತ್ತಡಕ್ಕೆ ಮಣಿದು ಕ್ರಮ ತೆಗೆದುಕೊಂಡಿದೆ ಸರಿ, ಆದರೆ ಇದು ಈಗಾಗಲೇ ವೇದನೆಗೊಳಗಾಗಿರುವ ಮುಸ್ಲಿಮರ ನೋವನ್ನು ಕಡಿಮೆ ಮಾಡುವುದಿಲ್ಲ. ಮೊದಲು ಕ್ಷಮೆಯಾಚನೆ ಆಗಲಿ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ. ಈ ನಡೆಯು ಭಾರತದಲ್ಲಿನ ಮುಸ್ಲಿಮರ ಮೇಲಿನ ದ್ವೇಷ ಮತ್ತು ಹಿಂಸಾಚಾರ ಹೆಚ್ಚಿಸುತ್ತದೆ ಎಂಬುದನ್ನು ಮರೆಯಲಾಗದು ಎಂದೂ ಅವರು ಹೇಳಿದ್ದಾರೆ.


ಭಾರತದಲ್ಲಿ ಹಿಂದುತ್ವ ಪೋಷಿತ ಪ್ರಚೋದಕವಾದ ಇಸ್ಲಾಮೋಪೋಬಿಯಾ ಸರಕುಗಳು ತೀವ್ರ ಬಲಪಂಥೀಯರಿಂದ ಬರುತ್ತಿದ್ದು ಮುಸ್ಲಿಂ ಗಣ್ಯತೆಗೆ ಕುಂದು ತರುತ್ತಿದೆ; ಮಾನವ ಹಕ್ಕು ದಮನಿಸುತ್ತಿದೆ ಎಂದು ಪಾಕಿಸ್ತಾನವು ಕೂಡಲೆ ಕ್ರಮ ತೆಗೆದುಕೊಳ್ಳುವಂತೆ ಯುಎನ್- ಸಂಯುಕ್ತ ರಾಷ್ಟ್ರಗಳ ಸಂಸ್ಥೆ ಮತ್ತು ಒಐಸಿಗೆ ಪ್ರತ್ಯೇಕ ಮನವಿಗಳನ್ನು ಮಾಡಿದೆ. ಭಾರತವು ಹತ್ತಿರದ ಸಂಬಂಧ ಹೊಂದಿರುವ ಕತಾರ್, ಕುವೈಟ್, ಇರಾನ್ ಖಂಡನೆಯು ಭಾರತವು ಸ್ವಲ್ಪ ಯೋಚನೆಗೀಡು ಮಾಡಿದೆ. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಮೂರು ದಿನಗಳ ಕತಾರ್ ಅಧಿಕೃತ ಪ್ರವಾಸದಲ್ಲಿದ್ದಾಗಲೇ ನೂಪುರ್ ಶರ್ಮಾಳ ಹೇಳಿಕೆ ಗದ್ದಲ ಎಬ್ಬಿಸಿದೆ.


ಪಾಶ್ಚಾತ್ಯ ದೇಶಗಳಲ್ಲಿ ಮತ್ತು ಕೊಲ್ಲಿ ದೇಶಗಳಲ್ಲಿ ಪ್ರಭಾವಿಯಾಗಿರುವ ಸೌದಿ ಅರೇಬಿಯಾದ ಖಂಡನಾ ಪತ್ರ ಸಹ ಭಾರತಕ್ಕೆ ಬಿಸಿ ತುಪ್ಪವಾಗಿದೆ. ಅದರ ಜೊತೆಗೆ 57 ದೇಶಗಳ ಒಐಸಿ- ಇಸ್ಲಾಮಿಕ್ ಸಹಕಾರ ಒಕ್ಕೂಟವು ತೀವ್ರವಾಗಿ ಖಂಡಿಸಿರುವುದು ವಿಪರೀತಕ್ಕೆ ಹೋದಲ್ಲಿ ಭಾರತವು ಕಚ್ಚಾ ತೈಲದ ಸಮಸ್ಯೆಗೆ ಒಳಗಾಗುತ್ತದೆ. ಭಾರತೀಯ ಜನತಾ ಪಕ್ಷ ಸುಧಾರಿಸಬೇಕು ಎಂದೂ ಅದು ಹೇಳಿದೆ.
“ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫಘಾನ್ ಕೂಡ ಹೀನಾಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ. ಹಾಗೆಯೇ ಆಳುವ ಪಕ್ಷವನ್ನೂ ಖಂಡಿಸುತ್ತದೆ” ಎಂದು ಅಫಘಾನಿಸ್ತಾನದ ತಾಲಿಬಾನ್ ಸರಕಾರವು ಖಂಡನಾ ಹೇಳಿಕೆ ನೀಡಿದೆ. ಕತಾರ್ ನಲ್ಲಿನ ಭಾರತೀಯ ರಾಯಭಾರ ಕಚೇರಿಯು ನೂಪುರ್ ಮತ್ತು ನವೀನ್ ರ ಹೇಳಿಕೆಗಳು ವ್ಯಕ್ತಿಗತವೇ ಹೊರತು ಭಾರತದ್ದು ಇಲ್ಲವೇ ಬಿಜೆಪಿ ಪಕ್ಷದ್ದಲ್ಲ ಎಂದು ಕತಾರ್ ಸರಕಾರಕ್ಕೆ ಸಮಜಾಯಿಸಿ ಪತ್ರವನ್ನು ನೀಡಿದೆ.


“ಭಾರತದ ಬಿಜೆಪಿಯ ವಕ್ತಾರರ ಹೇಳಿಕೆಯು ಧಾರ್ಮಿಕ ದ್ವೇಷದ್ದಾಗಿದೆ. ಧಾರ್ಮಿಕ ವಿಚಾರಗಳನ್ನು ಅಗೌರವಿಸುವುದು ಇದರ ಮೂಲ ಉದ್ದೇಶವಾಗಿದ್ದು, ಜನಾಂಗೀಯ ದ್ವೇಷವೇ ಇದರ ಒಳ ಹುನ್ನಾರವಾಗಿದೆ. ಇಲ್ಲಿನ ನಾಗರಿಕತೆಗಳು ಉನ್ನತವಾಗಿದ್ದವು. ಅವುಗಳ ಸಮಾಧಿ ಹೊಸ ರಾಜಕೀಯದಲ್ಲಿ ಆಗುವುದು ಹೇಯ” ಎಂದು ಬಹರೇನ್ ಹೇಳಿದೆ. ಬಹರೇನ್, ಕುವೈತ್, ಕತಾರ್ ಗಳು ಬಿಜೆಪಿಯು ಜಗತ್ತಿನ ಎಲ್ಲ ಮುಸ್ಲಿಮರ ಕ್ಷಮೆ ಕೇಳುವುದೇ ಈ ದ್ವೇಷವನ್ನು ಶಮನ ಮಾಡಲು ಮಾರ್ಗ ಎಂದು ಹೇಳಿವೆ. ಒಐಸಿ ಮುಂದುವರಿದು ಪಕ್ಷದಿಂದ ಅಮಾನತು, ಉಚ್ಚಾಟನೆ ಇವೆಲ್ಲ ತಾತ್ಕಾಲಿಕ ಕ್ರಮಗಳಷ್ಟೆ. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಆದಲ್ಲಿ ಮಾತ್ರ ಮುಂದೆ ಇಂಥ ಕೀಳು ಹೇಳಿಕೆಗಳನ್ನು ನೀಡುವವರು ಅದನ್ನು ಹೇಳಲು ಸಾವಿರ ಬಾರಿ ಆಲೋಚಿಸುತ್ತಾರೆ ಎಂದು ಹೇಳಿದೆ. ಭಾರತದಲ್ಲಿ ಮುಸ್ಲಿಂ ಸಮುದಾಯದವರ ಸಾಂಸ್ಕೃತಿಕ ಭಾವನಾತ್ಮಕ ರಕ್ಷಣೆ ತಮ್ಮ ಹೊಣೆ ಎಂಬುದನ್ನು ಸರಕಾರ ಅರಿತಿರಬೇಕು ಎಂದು ತಿಳಿಸಿದೆ. ಆರಾಧನಾ ಸ್ಥಳಗಳ ಗಣ್ಯತೆ ಕಾಪಾಡುವುದೂ ಮುಖ್ಯ ಎಂದು ಹೇಳಿದೆ.


ವಿಶ್ವ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೂ ಒಐಸಿ ಮನವಿ ಮಾಡಿ, ಮಾನವ ಹಕ್ಕುಗಳ ದಮನ ಆಗದಂತೆ ತಮ್ಮ ಪ್ರಭಾವವನ್ನು ಬಳಸಬೇಕು ಎಂದೂ ಹೇಳಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮಂಡಳಿಗೆ, ನ್ಯಾಯಾಲಯಕ್ಕೆ ವಿಶೇಷ ಮನವಿಯನ್ನೂ ಒಐಸಿ ಸಲ್ಲಿಸಿದೆ. ಹಿಜಬ್ ಪ್ರಶ್ನೆ, ಭಾರತದಲ್ಲಿ ಮುಸ್ಲಿಂ ಹುಡುಗಿಯರ ಕಲಿಕೆಗೆ ಆಗಿರುವ ತೊಂದರೆಯನ್ನೂ ಓಐಸಿ ಪ್ರಸ್ತಾಪಿಸಿದೆ. ಭಾರತದ ಒಐಸಿಯ ಎಲ್ಲ ಹೇಳಿಕೆಗಳನ್ನು ಒಪ್ಪಿಲ್ಲ. ಕೆಲವು ದೇಶಗಳಲ್ಲಿ ಮುಸ್ಲಿಮರ ಸ್ಥಿತಿ ಭಾರತಕ್ಕಿಂತ ಕೆಟ್ಟದ್ದಾಗಿದೆ ಎಂದು ಹೇಳಿದೆ. ಒಐಸಿ ಹೇಳಿಕೆಯಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಹಿಜಾಬ್ ಪ್ರಶ್ನೆ ಎತ್ತಿ ಬಾಲಕಿಯರ ಶಿಕ್ಷಣಕ್ಕೆ ತೊಂದರೆ ಮಾಡಲಾಗಿದೆ ಎಂದೂ ಒತ್ತಿ ಹೇಳಲಾಗಿದೆ. ಒಐಸಿಯ ಪಟ್ಟಭದ್ರ ಹಿತಾಸಕ್ತಿಗಳು ಎಂಬ ಹೇಳಿಕೆಗೆ ಭಾರತದ ವಿದೇಶಾಂಗ ಸಚಿವಾಲಯವು ನಿಮ್ಮದು ಪಟ್ಟಭದ್ರ ಹಿತಾಸಕ್ತಿ ಎಂದು ಉತ್ತರಿಸಿರುವುದು ಸಮಸ್ಯೆಯನ್ನು ಬಿಗಿಗೊಳಿಸಿದೆ.


ಹ್ಯಾಶ್ ಟ್ಯಾಗ್ ಗಳ ಮೂಲಕ ಭಾರತದ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕೊಲ್ಲಿ ದೇಶಗಳಲ್ಲಿ ನಡೆದಿರುವ ಪ್ರಚಾರವು ಭಾರತದ ವ್ಯಾಪಾರಿಗಳನ್ನು ಒಂದಿಷ್ಟು ಕಂಗೆಡಿಸಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಿಜೆಪಿ ಸರಕಾರ ಮತ್ತು ಪ್ರಧಾನಿ ಮೋದಿಯವರನ್ನು ಇದಕ್ಕೆಲ್ಲ ಹೊಣೆ ಮಾಡಿ ಟೀಕಿಸಲಾಗಿದೆ. ಕೊಲ್ಲಿ ದೇಶಗಳಲ್ಲಿ 65 ಲಕ್ಷ ಭಾರತೀಯರು ಬದುಕುತ್ತಿದ್ದಾರೆ. ಕೆಲವು ದೇಶಗಳಲ್ಲಿ ಅತಿ ಸಂಖ್ಯೆಯಲ್ಲಿರುವ ವಿದೇಶೀಯರೆನಿಸಿದ್ದಾರೆ.

Join Whatsapp