ಬೆಂಗಳೂರು: ದೇಶದಲ್ಲಿ ಬಿಜೆಪಿಗರ ದ್ವೇಷ ರಾಜಕಾರಣದ ಕರಿನೆರಳು ಅನಿವಾಸಿ ಭಾರತೀಯರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಪ್ರವಾದಿ ಮುಹಮ್ಮದ್ ಕುರಿತ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.
ಇದಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, ಭಾರತದ ರಾಯಭಾರಿಗಳು ಜಾಗತಿಕವಾಗಿ ಅವಮಾನಕ್ಕೆ ಒಳಗಾಗುತ್ತಿರುವುದು ಇದೇ ಮೊದಲು. ಬಿಜೆಪಿಯ ದ್ವೇಷ ರಾಜಕೀಯಕ್ಕೆ ದೇಶದ ಮಾನ ಹರಾಜು ಆಗುತ್ತಿದ್ದು, ವಿಶ್ವಗುರು ಎಂದು ವಾಟ್ಸಾಪ್’ನಲ್ಲಿ ಪ್ರಚಾರ ಪಡಿಸುವ ಬದಲು ಉತ್ತಮ ಆಡಳಿತದ ನಿರೂಪಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿಯ ಕಳಪೆ ರಾಜಕೀಯದಿಂದಾಗಿ ಒಂದು ಕಡೆ ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ಉತ್ಪನ್ನಗಳನ್ನು ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್ ಗಳಲ್ಲಿ ಬಹಿಷ್ಕರಿಸಲಾಗುತ್ತಿದ್ದು, ಇನ್ನೊಂದು ಕಡೆ ಕತಾರ್, ಕುವೈಟ್ ಮತ್ತು ಇರಾನ್ ರಾಷ್ಟ್ರಗಳಲ್ಲಿ ಅಲ್ಲಿನ ಸರ್ಕಾರ ರಾಯಭಾರಿಗಳಿಗೆ ಛೀಮಾರಿ ಹಾಕಿ ನೋಟಿಸ್ ನೀಡಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಈ ಮಧ್ಯೆ ಭಾರತದ ರಫ್ತು, ಭಾರತೀಯ ವಸ್ತುಗಳ ನಿಷೇಧ ಹೇರಬೇಕೆಂಬ ಕೂಗು ಕೇಳಿ ಬರುತ್ತಿದೆ. ಭಾರತದ ರಫ್ತಿನ ಪ್ರಮಾಣ ಆಮದಿಗಿಂತ ಕೆಳಮಟ್ಟದಲ್ಲಿದೆ. ಈ ಪರಿಸ್ಥಿತಿಯಲ್ಲಿ ಆಮದು ಅಧಿಕವಾಗಿ ರಫ್ತಿನ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ಇಂಥ ಸಮಯದಲ್ಲಿ ಭಾರತೀಯ ಉತ್ಪನ್ನಗಳಿಗೆ ನಿಷೇಧ ಹೇರಿದರೆ ಭಾರತಕ್ಕೆ ಸಂಕಷ್ಟ ಎದುರಾಗಲಿದೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.