ಶಾಸಕ ಲಾಲಾಜಿ ಆರ್. ಮೆಂಡನ್, ರಾಜಶೇಖರಾನಂದ ಸ್ವಾಮೀಜಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೋವಿಡ್ – 19 ನಿಯಮಗಳ ಉಲ್ಲಂಘನೆ

Prasthutha|

ಉಡುಪಿ : ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಾಜಶೇಖರಾನಂದ ಸ್ವಾಮೀಜಿ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದ ಕಾರ್ಯಕ್ರಮವೊಂದರಲ್ಲಿ ನೂರಾರು ಮಂದಿ ಕೋವಿಡ್ -19 ಸುರಕ್ಷತೆಗಾಗಿ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಭಾಗವಹಿಸಿದ ಘಟನೆ ಉಡುಪಿ ಜಿಲ್ಲೆಯ ಪೆರ್ಡೂರ್ ನಲ್ಲಿ ನಡೆದಿದೆ.

- Advertisement -

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವಾರು ಮಂದಿ ಮಾಸ್ಕ್ ಧರಿಸಿರಲಿಲ್ಲ. ಕೆಲವರು ಮಾಸ್ಕ್ ಧರಿಸಿದ್ದರೂ, ಅದನ್ನು ಮೂಗು, ಬಾಯಿ ಸರಿಯಾಗಿ ಮುಚ್ಚಿದ ರೀತಿಯಲ್ಲಿ ಬಳಸದೆ ಅರ್ಧದಷ್ಟು ಮಾತ್ರ ಧರಿಸಿದ್ದುದೂ ಕಂಡುಬಂತು. ಸಾಮಾಜಿಕ ಅಂತರವನ್ನೂ ಸರಿಯಾಗಿ ನಿರ್ವಹಿಸಲಿಲ್ಲ ಎಂದು ತಿಳಿದುಬಂದಿದೆ.  

ಪೆರ್ಡೂರ್ ನಲ್ಲಿ ಹಿಂದು ರಕ್ಷಣ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ‘ಲವ್ ಜಿಹಾದ್’ ಕುರಿತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಈ ಅವ್ಯವಸ್ಥೆ ಕಂಡುಬಂದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡುತ್ತಾ, ‘ಲವ್ ಜಿಹಾದ್’ ಅನ್ನು ಬೆಂಬಲಿಸಿದರೆ ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದರು.

- Advertisement -

ಬಜರಂಗ ದಳ ಸಂಚಾಲಕ ಕೆ.ಆರ್. ಸುನೀಲ್, ವಿಶ್ವ ಹಿಂದೂ ಪರಿಷತ್ ನ ದಿನೇಶ್ ಮೆಂಡನ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಾಸ್ಕ್ ಧರಿಸದೆ ಇಷ್ಟೊಂದು ಜನ ಒಟ್ಟಿಗೆ ಸೇರಿರುವುದಕ್ಕೆ ಇವರಿಗೆ ದಂಡವಿಲ್ಲವೇ?, ಸಾಮಾಜಿಕ ಅಂತರದ ನೆಪದಲ್ಲಿ ಇತರ ಧಾರ್ಮಿಕ ಹಬ್ಬ, ಆಚರಣೆಗಳಿಗೆ ನಿಯಂತ್ರಣ ಹೇರಿರುವ ಪೊಲೀಸರು, ಇಂತಹ ರಾಜಕೀಯ ಪ್ರೇರಿತ ಕಾರ್ಯಕ್ರಮಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಿದ್ದಾರೆ ಕಾದುನೋಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.     



Join Whatsapp