ಬರೇಲಿ : ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ಕುಖ್ಯಾತಿಯ ಬಲವಂತದ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಬಳಿಕ, ಅಲ್ಲಿಂದ ಹಲವಾರು ಅಂತರ್ ಧರ್ಮೀಯ ಜೋಡಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗಲು ಆರಂಬಿಸಿವೆ ಎಂದು ವರದಿಯೊಂದು ತಿಳಿಸಿದೆ.
ಯೋಗಿ ಆದಿತ್ಯನಾಥ್ ಸರಕಾರ ಜಾರಿಗೊಳಿಸಿದ ನೂತನ ಕಾನೂನು ಜಾರಿಗೊಂಡು ಒಂದು ತಿಂಗಳೊಳಗೆ ಈಗಾಗಲೇ 35 ಮಂದಿಯನ್ನು ಬಂಧಿಸಲಾಗಿದೆ. ಹಲವಾರು ಮಂದಿಗೆ ಕಿರುಕುಳ ನೀಡಲಾಗಿದೆ, ಬೆದರಿಕೆಯೊಡ್ಡಲಾಗಿದೆ. ಬಿಜೆಪಿ ಬೆಂಬಲಿಗರು ಅನ್ಯಧರ್ಮೀಯ ಜೋಡಿಗಳನ್ನು ಬೆದರಿಸಲು ಈ ಕಾನೂನನ್ನು ವ್ಯಾಪಕ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿಗಳಿವೆ.
“ನಾನು ಇಕ್ಬಾಲ್ ಎಂಬಾತನನ್ನು ಪ್ರೀತಿಸುತ್ತಿದ್ದೇನೆ ಎಂದು ತಿಳಿದ ಕೂಡಲೇ ನನ್ನನ್ನು ಮನೆಯಲ್ಲಿ ಕೂಡಿ ಹಾಕಿದರು. ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರು. ನನಗೆ ಆತ ಹಿಪ್ನಾಟಿಸಂ ಮಾಡಿದ್ದಾನೆಯೇ ಎಂದು ತಿಳಿಯಲು ಮನಶಾಸ್ತ್ರಜ್ಞರ ಬಳಿ ಕರೆದೊಯ್ಯಲಾಗಿತ್ತು. ಈ ರೀತಿ ಹಲವು ಬಾರಿ ಕಿರುಕುಳ ನೀಡಲಾಗಿದೆ. ಕೊನೆಗೆ ನಾವಿಬ್ಬರೂ ಅಲ್ಲಿಂದ ಬಂದು ದೆಹಲಿಗೆ ಬಂದು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದೇವೆ. ಮುಂದೇನಾಗಬಹುದು ಗೊತ್ತಿಲ್ಲ” ಎಂದು ಸ್ಮೃತಿ ಎಂಬಾಕೆ ಹೇಳಿರುವುದಾಗಿ ವರದಿ ತಿಳಿಸಿದೆ.
ನಮ್ಮ ರಾಜ್ಯದಲ್ಲಿ ಕಾನೂನು ಜಾರಿಯಾದ ಬಳಿಕ ತೊಂದರೆಗಳು ಹೆಚ್ಚಾಗುವುದು ಬೇಡ ಎಂದು ನಾವು ಪರಾರಿಯಾಗಿದ್ದೇವೆ. ಅಗತ್ಯಬಿದ್ದರೆ ನಾನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲೂ ಸಿದ್ಧನಿದ್ದೇನೆ. ನಮಗೆ ಧರ್ಮ ಒಂದು ಪ್ರಶ್ನೆಯೇ ಅಲ್ಲ ದು ಮುಹಮ್ಮದ್ ಶದಾಬ್ ಎಂಬಾತ ಹೇಳುತ್ತಾನೆ. ಶದಾಬ್ ಮತ್ತು ಅನಾಮಿಕ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದಾಗ ಪ್ರೀತಿಸಲಾರಂಭಿಸಿದ್ದರು.
ಕೆಲವು ಸಂಘಟನೆಗಳವರು ತಮ್ಮನ್ನು ಕೊಲ್ಲುವವರೆಗೂ ಬಂದಿದ್ದರು ಎಂದು ಶಾದಾಬ್ ಹೇಳುತ್ತಾನೆ. ಅವರು ಹೆತ್ತವರಿಗೆ ತೊಂದರೆ ಕೊಡಬಹುದು ಎಂದು ನಾವು ಇದನ್ನು ನಿಲ್ಲಿಸುತ್ತೇವೆ ಎಂದಿದ್ದೆವು. ಆದರೆ, ನಾವು ಸಂಪರ್ಕದಲ್ಲಿದ್ದೆವು ಎಂದು ಅವರು ತಿಳಿಸಿದ್ದಾರೆ.
ನೂತನ ಕಾನೂನಿನಿಂದಾಗಿ ಕಿರುಕುಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಂತರ್ ಧರ್ಮಿಯ ಜೋಡಿಗಳು ಉತ್ತರ ಪ್ರದೇಶ ತೊರೆಯುತ್ತಿರುವ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದೆ.