ಬರ್ತ್ ಡೇ ಪಾರ್ಟಿ ಮುಗಿಸಿ ಸ್ನೇಹಿತೆಯೊಂದಿಗೆ ನಡೆದುಕೊಂಡು ಹೋದ ಮುಸ್ಲಿಂ ಹುಡುಗನ ವಿರುದ್ಧ ‘ಲವ್ ಜಿಹಾದ್’ ಕೇಸ್!

Prasthutha|

ಲಖನೌ : ಉತ್ತರ ಪ್ರದೇಶದ ಬಿಜ್ನೂರ್ ನಲ್ಲಿ ಬರ್ತ್ ಡೇ ಪಾರ್ಟಿ ಮುಗಿಸಿ ತನ್ನೊಂದಿಗೆ ನಡೆದುಕೊಂಡು ಬಂದ ಸ್ನೇಹಿತನ ಮೇಲೆ ನೂತನ ‘ಲವ್ ಜಿಹಾದ್’ ಕುಖ್ಯಾತಿಯ ಬಲವಂತದ ಮತಾಂತರ ತಡೆ ಕಾಯ್ದೆ, ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆ, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು 16 ವರ್ಷದ ದಲಿತ ಹುಡುಗಿಯೊಬ್ಬಳು ಆಪಾದಿಸಿದ್ದಾಳೆ. ತನ್ನ ಹೇಳಿಕೆಗೆ ತಾನು ಬದ್ಧಳಾಗಿರುವುದಾಗಿಯೂ ಆಕೆ ಘೋಷಿಸಿದ್ದಾರೆ.

“ನಾನು ಇದನ್ನು ಮ್ಯಾಜಿಸ್ಟ್ರೇಟರಿಗೂ ಹೇಳಿದ್ದೇನೆ, ನಾನು ನನ್ನ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗಿರುವುದು ಸಮಸ್ಯೆ ಎನಿಸಿದವರಿಗಾಗಿ ಇದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ. ಅವರು ನನ್ನ ವೀಡಿಯೊ ಮಾಡಿದ್ದಾರೆ ಮತ್ತು ಅದನ್ನು ಲವ್ ಜಿಹಾದ್ ಎಂದು ಹೇಳುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ನನ್ನ ಸ್ವಂತ ಇಚ್ಛೆಯಿಂದಲೇ ಹೋಗಿದ್ದೆ” ಎಂದು ಬಾಲಕಿ ‘ಇಂಡಿಯನ್ ಎಕ್ಸ್ ಪ್ರೆಸ್’ ಜೊತೆ ಮಾತನಾಡುತ್ತಾ ಹೇಳಿದ್ದಾಳೆ.

- Advertisement -

ಡಿ.14ರಂದು ದಲಿತ ಹುಡುಗಿಯು ರಾತ್ರಿ 10:00 ಗಂಟೆಗೆ ತನ್ನ ಸ್ನೇಹಿತೆಯ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ತನ್ನ ಹಳೆಯ ಸಹಪಾಠಿ ಮುಸ್ಲಿಮ್ ಹುಡುಗನೊಂದಿಗೆ ನಡೆದುಕೊಂಡು ಮನೆಗೆ ಹಿಂದಿರುಗುತ್ತಿದ್ದಳು. ಆಗ ಕೆಲವು ದುಷ್ಕರ್ಮಿಗಳ ಗುಂಪು ಅವರನ್ನು ತಡೆದು ನಿಲ್ಲಿಸಿ, ಅವರನ್ನು ಪ್ರಶ್ನಿಸಿ ಹಲ್ಲೆ ನಡೆಸಿತ್ತು. ಅವರು ಭಿನ್ನ ಧರ್ಮದವರು ಎಂದು ತಿಳಿದಾಗ ಅವರನ್ನು ಸ್ಥಳೀಯ ಪೊಲೀಸ್ ಠಾಣೆಗೂ ಕರೆದೊಯ್ಯಲಾಗಿತ್ತು.

ಹುಡುಗಿಯ ತಂದೆಯ ಮೇಲೆ ಒತ್ತಡ ಹೇರಿ ದೂರು ದಾಖಲಿಸಿಕೊಳ್ಳಲಾಗಿತ್ತು. ದೂರಿನಲ್ಲಿ ತಮ್ಮ ಮಗಳನ್ನು ಓಡಿಸಿಕೊಂಡು ಹೋಗಿ ಮದುವೆಯಾಗುವ ಮತ್ತು ಮತಾಂತರದ ಉದ್ದೇಶದಿಂದ ಪ್ರೇರಿಪಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ಆದರೆ. ತಾನು ದೂರು ನೀಡಿಲ್ಲ, ಪೊಲೀಸರು ಆ ರೀತಿ ತನ್ನಿಂದ ಬರೆಸಿಕೊಂಡರು ಎಂದು ಈಗ ಹುಡುಗಿಯ ತಂದೆಯೇ ಸ್ವತಃ ಹೇಳುತ್ತಾರೆ. “ನಾನು ನನ್ನ ಮಗಳನ್ನು ಸಂಪೂರ್ಣ ನಂಬುತ್ತೇನೆ. ಆಕೆ ಏನು ತಪ್ಪು ಮಾಡಿದ್ದಾಳೆ? ಇವರ ರಾಜಕಾರಣದಲ್ಲಿ ಅವಳನ್ನು ಏಕೆ ಎಳೆದುತರಬೇಕು? ಒಂದು ಹೆಣ್ಣು ಮತ್ತು ಗಂಡು ಜೊತೆಯಾಗಿ ನಡೆದುಕೊಂಡು ಹೋಗುವುದು ಈಗ ಕಾನೂನು ಬಾಹಿರವೇ?” ಎಂದು ಹುಡುಗಿಯ ತಂದೆ ಪ್ರಶ್ನಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಆಡಳಿತದ ಹೊಸ ಕಾನೂನು, ಎಸ್ ಸಿ/ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದೂರು ದಾಖಲಾಗಿರುವ ಮುಸ್ಲಿಂ ಹುಡುಗ ಈಗ ಬಿಜ್ನೂರ್ ಜೈಲಿನಲ್ಲಿದ್ದಾನೆ.

ಮುಸ್ಲಿಂ ಹುಡುಗನಿಗೆ 17 ವರ್ಷ ಎಂದು ಆತನ ಕುಟುಂಬ ಹೇಳುತ್ತಿದೆ. ಆದರೆ, ಪೊಲೀಸರು ಆತನಿಗೆ 18 ವರ್ಷವಾಗಿದೆ ಎಂದು ಆತನನ್ನು ಜೈಲಿಗೆ ಕಳುಹಿಸಿದ್ದಾರೆ. ಆತ ವಯಸ್ಕನಲ್ಲದಿದ್ದರೆ, ಜನ್ಮ ಪ್ರಮಾಣ ಪತ್ರ ತಂದು ತೋರಿಸಲಿ ಎಂದು ಪೊಲೀಸರು ಉದ್ದಟತನದಿಂದ ಮಾತನಾಡುತ್ತಾರೆ.

ಘಟನೆಯನ್ನು ರಾಜಕೀಯಗೊಳಿಸುತ್ತಿರುವ ಸ್ಥಳೀಯ ಗ್ರಾಮ ಪ್ರಧಾನರ ಬಗ್ಗೆ ಹುಡುಗಿಯ ತಂದೆ ಆಕ್ರೋಶ ಹೊರಹಾಕಿದ್ದಾರೆ. “ಇದೆಲ್ಲಾ ರಾಜಕೀಯ. ಅವರು ನನ್ನ ಮಗಳ ವೀಡಿಯೊ ಮಾಡಿದ್ದಾರೆ ಮತ್ತು ಅದನ್ನು ಲವ್ ಜಿಹಾದ್ ಎನ್ನುತ್ತಿದ್ದಾರೆ. ನಾನೂ ಈ ಹಿಂದೆ ಪ್ರಧಾನ್ ಆಗಿದ್ದೆ ಮತ್ತು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ. ಆದರೆ, ಈಗ ಇವರು ನನ್ನ ಮಗಳನ್ನು ನಾಚಿಕೆಗೀಡುಮಾಡಿದ್ದಾರೆ ಮತ್ತು ಗ್ರಾಮವನ್ನು ವಿಭಜಿಸಿದ್ದಾರೆ” ಎಂದು ಹುಡುಗಿಯ ತಂದೆ ಆರೋಪಿಸಿದ್ದಾರೆ.

ಹುಡುಗಿಯ ಮನೆಯಿಂದ ಕಿ.ಮೀ. ದೂರದಲ್ಲಿ ಮುಸ್ಲಿಂ ಹುಡುಗನ ಒಂದು ಕೋಣೆಯ ಸಣ್ಣ ಇಟ್ಟಿಗೆಯ ಮನೆಯಿದೆ. ಅದರಲ್ಲಿ ನಾಲ್ವರು ಸೋದರ, ಸೋದರಿಯರು ಮತ್ತು ತಾಯಿಯೊಂದಿಗೆ ಆತನ ಕುಟುಂಬ ವಾಸಿಸುತ್ತಿದೆ. “ನಾನು ನನ್ನ ಮಗನನ್ನು ನೋಡಲು ಬಯಸಿದ್ದೇನೆ, ಅವರು ಅವನ ವಿರುದ್ಧ ಸುಳ್ಳು ಕೇಸ್ ಹಾಕಿದ್ದಾರೆ” ಎಂದು ಹುಡುಗನ ತಾಯಿ ತನ್ನ ಅಳಲು ತೋಡಿಕೊಳ್ಳುತ್ತಾರೆ.

ಹುಡುಗನ ತಂದೆ ಒಂದು ವರ್ಷದ ಹಿಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಆತನ ಅಣ್ಣಂದಿರು ಕೃಷಿ ಕೂಲಿ ಕಾರ್ಮಿಕರು, ಒಬ್ಬ ಅಣ್ಣ ಡೆಹ್ರಾಡೂನ್ ನಲ್ಲಿ ಟೈಲರ್ ಆಗಿದ್ದಾನೆ.

“ಡಿ.14ರಂದು ಸಂಜೆ ತಾನು ಹುಟ್ಟುಹಬ್ಬದ ಪಾರ್ಟಿಯೊಂದಕ್ಕೆ ಹೋಗಿಬರುತ್ತೇನೆ, ರಾತ್ರಿ ಊಟಕ್ಕೆ ಬರುವುದಿಲ್ಲ ಎಂದು ಹೇಳಿ ಮಗ ಹೋಗಿದ್ದ. ಈಗ ಆತ ಹುಡುಗಿಯನ್ನು ಇಸ್ಲಾಮ್ ಗೆ ಮತಾಂತರ ಮಾಡುತ್ತಿದ್ದಾನೆ ಎಂದು ಅವರು ಆಪಾದಿಸುತ್ತಿದ್ದಾರೆ. ಇದು ಸಂಪೂರ್ಣ ತಪ್ಪು’ ಎಂದು ಹುಡುಗನ ತಾಯಿ ಹೇಳುತ್ತಾರೆ. “ಈ ವರ್ಷ ಎಲ್ಲಾ ಹಾಳಾಗಿಹೋಯಿತು. ಈಗ ನಾವು ಈ ಕೇಸ್ ವಿರುದ್ಧ ಹೋರಾಡಲು ಹಣಹೊಂದಿಸಬೇಕು” ಎಂದು ಅವರು ಕಣ್ಣೀರು ಹಾಕುತ್ತಾರೆ.        

- Advertisement -