ರಮಝಾನಿನಲ್ಲಿರಲಿ ಉಲ್ಲಾಸ ಉತ್ಸಾಹ

Prasthutha|

ರಮಝಾನ್ ಆಗಮನವೆಂಬುದೇ ಸತ್ಯವಿಶ್ವಾಸಿಯ ಪಾಲಿಗೆ ರೋಮಾಂಚನದೊಂದಿಗಿನ ಚೇತೋಹಾರಿ Feeling. ಪುಣ್ಯ ರಜಬ್‌  ನೊಂದಿಗೆ ಆರಂಭಗೊಳ್ಳುತ್ತದೆ ರಮಝಾನ್‌ ನ ಬರುವಿಕೆಗಾಗಿ ಕ್ಷಣಗಣನೆ. ರಜಬ್‌ ನ ನಂತರದ ಶಅಬಾನಿನಲ್ಲಂತೂ ರಮಝಾನ್ ಸ್ವಾಗತಕ್ಕೆ ಮನೆ ಮನೆಗಳೆಲ್ಲಾ ಸಜ್ಜುಗೊಂಡಿರುತ್ತವೆ. ಮನೆಯ ಪ್ರತೀ ಇಂಚಿಂಚನ್ನು ಒಪ್ಪ ಓರಣಗೊಳಿಸುವ ಭರ ಭರಾಟೆಯೊಂದಿಗೆ ಆಹಾರ ಸಾಮಾಗ್ರಿಗಳನ್ನಿಡುವ ಡಬ್ಬಿಗಳನ್ನು ಕೂಡ ಅಚ್ಚುಕಟ್ಟಾಗಿ ಒಣಗಿಸಿ ರಮಝಾನಿಗೆ ಬೇಕಾದ ಆಹಾರ ಸಾಮಾಗ್ರಿಗಳನ್ನೆಲ್ಲಾ ಶುಚಿಗೊಳಿಸಿ, ಅಣಿಗೊಳಿಸಿಡುವ ಸಂಭ್ರಮದಲ್ಲಿ ಕೆಲವಷ್ಟು ದೂರದರ್ಶಿತ್ವವೂ ಇರುತ್ತದೆ. ರಮಝಾನಿನ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿರುವುದರಿಂದ ಆ ಸಮಯವನ್ನು ಆದಷ್ಟು ಅಲ್ಲಾಹನ ಸ್ಮರಣೆಯೊಂದಿಗೆ ಆರಾಧನೆಯಲ್ಲಿ ಕಳೆಯಬೇಕೆಂಬ ಮಹದಿಚ್ಛೆ. ಅದಕ್ಕಾಗಿಯೇ ರಮಝಾನಿನ ಸಮಯ ಪೋಲಾಗಬಾರದೆಂಬ ನಿಟ್ಟಿನಲ್ಲಿ ಕೈಗೊಳ್ಳುವ ಕಾರ್ಯಾಚರಣೆಯೇ ಆಹಾರ ವಸ್ತುಗಳ ಸಂಗ್ರಹ. ಇದು ಗೃಹಿಣಿಯರನ್ನು ಅಧಿಕ ವೇಳೆ ಅಡುಗೆ ಮನೆಯಲ್ಲಿ ಕಳೆಯುವುದನ್ನು ತಪ್ಪಿಸುತ್ತದೆ ಕೂಡ.

- Advertisement -

ಪೂರ್ವ ತಯಾರಿಯ ಜೊತೆಗೆ ಪ್ರಾರಂಭವಾಗುವ ರಮಝಾನಿನ ಆರಂಭದಲ್ಲಿ ಶೂರತನ ಕಾಣುವುದು ದಿಟ. ಆದರೆ ಬರಬರುತ್ತಾ… ರಾಯರ ಕುದುರೆ ಕತ್ತೆಯಾಯಿತು ಎಂಬಂತೆ ಮೊದಮೊದಲು ಇದ್ದ ಉತ್ಸಾಹ ಉಲ್ಲಾಸ ಕ್ರಮೇಣ ಕಡಿಮೆಯಾಗ ತೊಡಗುತ್ತದೆ. ರಮಝಾನಿನ ಮಧ್ಯಕ್ಕೆ ಬರುವಾಗ ಆಮೆ ನಡಿಗೆಯಲ್ಲಿ ಸಾಗತೊಡಗುತ್ತದೆ. ನಂತರದ ಮಹತ್ವವೇರಿದ ಒಂದು ದಿನದಲ್ಲಿ ಸಾವಿರ ತಿಂಗಳುಗಳ ಪ್ರತಿಫಲವಿದೆ ಎಂದು ಕುರ್‌ ಆನ್ ಬಣ್ಣಿಸಿದ ಲೈಲತುಲ್ ಕದ್ರ್‌ ನ ರಾತ್ರಿಗಳ ಪರಿವೆಯೇ ಇಲ್ಲದಂತೆ ಹಗಲಲ್ಲಿ ಶಾಪಿಂಗ್ ನಡೆಸುತ್ತಾರೆ. ಕೊನೆಗೆ ಸುಸ್ತಾಗಿ ಮನೆ ಸೇರಿ ಗಾಢ ನಿದ್ದೆಗೆ ತಲುಪಿ ರಮಝಾನಿನ ಅಂತಃಸತ್ವವೇ ಮರೆತು ಬಿಡುವಂತಹ ಸಂದರ್ಭ ಸೃಷ್ಟಿಸುವವರು ಅಧಿಕ ಮಂದಿ. ಹಗಲಿಡೀ ನಿದ್ದೆಯಲ್ಲೋ, ಮೊಬೈಲಿನಲ್ಲೋ ಟೈಮ್‌ ಪಾಸ್ ಮಾಡುವವರು ಇನ್ನು ಕೆಲವರು.

ರಮಝಾನ್ ಆತ್ಮಾವಲೋಕನ ಮತ್ತು ಆತ್ಮಸಂಸ್ಕರಣೆಯ ತಿಂಗಳಾಗಿದೆ. ಮಾಡಿದ ಪಾಪಗಳ ಬಗ್ಗೆ ಪ್ರಾಯಶ್ಚಿತ ಮಾಡಿ ಮುಂದೆ ನಮ್ಮ ಜೀವನದಲ್ಲಿ ಪಾಪಗಳು ಬರದಂತೆ ತಡೆ ಹಿಡಿಯುವುದೇ ನಮ್ಮ ಧ್ಯೇಯ ಎಂಬುದನ್ನು ಮನೆ ಮಂದಿ ಮಕ್ಕಳಿಗೆ ಮನವರಿಕೆ ಮಾಡಿ ಕೊಡುವುದು ಕೂಡ ನಮ್ಮ ಕರ್ತವ್ಯವಾಗಿದೆ.

- Advertisement -

ರಮಝಾನಿನ ಅಮೂಲ್ಯ ಸಮಯದ ಮಹತ್ವ ಅದರ ಸದುಪಯೋಗದಿಂದಾಗುವ ಸತ್ಫಲ, ದುರುಪಯೋಗದಿಂದಾಗುವ ನಷ್ಟಗಳ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ರಮಾಝಾನಿನ ಪೂರ್ವ ತಯಾರಿಯ ಪಟ್ಟಿಯಲ್ಲಿ ಇರಬೇಕಾದುದು ಅತ್ಯಗತ್ಯವಾಗಿದೆ.

ಅಲ್ಲಾಹನ ಇಷ್ಟಕ್ಕೂ ಪ್ರೀತಿಗೂ ಜೀವನದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡುವುದರ ಪ್ರಾಯೋಗಿಕ ರೂಪವೇ ಉಪವಾಸವಾಗಿದೆ. ಯಾರು ಪ್ರತಿಫಲಾಪೇಕ್ಷೆಯಿಂದ ಪೂರ್ಣ ಮನಸ್ಸಿನೊಂದಿಗೆ ಉಪವಾಸ ಆಚರಿಸುತ್ತಾರೋ ಅವರ ಹಿಂದಿನ ಪಾಪಗಳೆಲ್ಲವೂ ಮನ್ನಿಸಲ್ಪಡುವುದು ಎಂಬ ಹದೀಸ್ ವಚನದ ಉದಾಹರಣೆಯನ್ನು ವಿವರಿಸಿ ಮನೆಮಂದಿಯಲ್ಲಿ ನವಚೇತನವನ್ನು ಹರಿಸಬೇಕಾಗಿದೆ. ಅದಕ್ಕಿಂತ ಮುಂಚೆ ಸ್ವತಃ ನಮ್ಮಲ್ಲೇ ಪ್ರೇರಣಾ ಶಕ್ತಿಯನ್ನು ತುಂಬಬೇಕಾಗಿದೆ.

ಹಗಲು ಒಂದ್ಹೊತ್ತು ಊಟ ಬಿಟ್ಟದ್ದಕ್ಕಾಗಿ ಮುಯ್ಯಿ ತೀರಿಸುವಂತೆ ಬಡ್ಡಿ ಚಕ್ರಬಡ್ಡಿ ಸಮೇತ ಹೊಟ್ಟೆ ಬಿರಿಯ ತಿಂದು ಕುಡಿದು ತೂಕಡಿಕೆಯ ದಾಸರಾಗದೆ ಸರಳವಾದ ಹಿತ ಮಿತ ಆಹಾರ ಪಾನೀಯಗಳ ಸೇವನೆ ಹಾಗೂ ಆರಾಧನೆಗಳಲ್ಲಿ ಹೆಚ್ಚು ಉತ್ಸಾಹ ಹೊಂದಿರುವುದು ನೈಜ ಸತ್ಯವಿಶ್ವಾಸಿಯ ಲಕ್ಷಣವಾಗಿದೆ.

ಉಪವಾಸದಿಂದ ಧಾರ್ಮಿಕ ಹಾಗೂ ಆಂತರಿಕ ಶಕ್ತಿ ವರ್ಧಿಸುತ್ತದೆ. ಉಪವಾಸಿಗನಲ್ಲಿರಬೇಕಾದುದು ಕೇವಲ ದೇವ ಸಂಪ್ರೀತಿ ಮಾತ್ರವಾಗಿರುತ್ತದೆ. ಇದುವೇ ತಖ್ವಾದ ನೈಜ ಉದ್ದೇಶ. ಈ ಉದ್ದೇಶ ಈಡೇರಬೇಕಾದರೆ ಉಪವಾಸಿಗನಲ್ಲಿ ಉಲ್ಲಾಸ ಉತ್ಸಾಹ ತುಂಬಿರಬೇಕು. ಅದು ಬಾಹ್ಯವೂ ಆರಂಭ ಶೂರತನದಿಂದಲೂ, ಡಾಂಭಿಕತನದಿಂದಲೂ ಮುಕ್ತವಾಗಿದ್ದು ಆದಿಯಿಂದ ಅಂತ್ಯದವರೆಗೂ ಉಳಿಸಿಕೊಂಡಿರಬೇಕು. ಇದು ಸ್ವತಃ ನಮ್ಮ ಬಾಧ್ಯತೆ ಮಾತ್ರವಾಗಿರದೆ ಮನೆಯ ಇತರ ಸದಸ್ಯರುಗಳನ್ನೂ ಪತಿ ಮಕ್ಕಳನ್ನೂ ಈ ರೀತಿಯ ತರಬೇತಿಗೆ ಸಜ್ಜುಗೊಳಿಸಬೇಕಾಗಿದೆ. ಅದಕ್ಕಾಗಿ ಕೆಲವಷ್ಟು ಟಿಪ್ಸ್‌ ಗಳನ್ನು ಪಾಲಿಸಿದರೆ ರಮಝಾನಿನ ದಿನಗಳನ್ನು ತೂಕಡಿಕೆ, ನಿದ್ದೆ, ಆಲಸ್ಯ, ಜಡತ್ವ, ಮೊಬೈಲ್‌ ಗಳಲ್ಲಿ ಕಳೆಯದೇ ಅಲ್ಲಾಹನಿಗಾಗಿ ನಡೆಸುವ ಆರಾಧನೆಗಳನ್ನು ಉಲ್ಲಾಸ, ಉತ್ಸಾಹದೊಂದಿಗೆ ನೈಜ ಮಧುರಾನುಭೂತಿಯ ಸವಿಯಲ್ಲಿ ಆಸ್ವಾದಿಸಬಹುದಾಗಿದೆ.

ಕಳೆದ ರಮಝಾನಿನಲ್ಲಿ ನಮ್ಮೊಂದಿಗಿದ್ದವರು ಈ ಸಲ ಇಲ್ಲ. ಇನ್ನು ರಮಝಾನಿನಲ್ಲಿ ನನ್ನ ಅವಸ್ಥೆ ಹೇಗೋ ಏನೋ… ಅದಕ್ಕಾಗಿ ನನ್ನನ್ನು ನಾನು ತಿದ್ದಿಕೊಂಡು ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಂಡು ಉತ್ತಮ ಜೀವನ ನಡೆಸಲು ಈ ರಮಝಾನ್ ನನಗೆ ಪ್ರೇರಣೆಯಾಗಬೇಕು. ಇಷ್ಟರತನಕ ರಮಝಾನ್ ಕಳಾ ಮಾಡಿದೆಷ್ಟೋ… ಅನ್ಯರಿಗೂ ನೋವು ಕೊಟ್ಟದ್ದೆಷ್ಟೋ ಇನ್ನು ಆ ರೀತಿ ಮಾಡದೆ ಕ್ಲಪ್ತ ಸಮಯಕ್ಕೆ ನಮಾಝ್ ನಿರ್ವಹಿಸಿ, ಝಕಾತ್ ಪಾವತಿಸಿ, ಅನ್ಯಾಯ, ಅನಾಚಾರ, ಅಕ್ರಮಗಳಿಂದ ದೂರ ಸರಿದು ಬಡ್ಡಿ ವ್ಯವಹಾರದಿಂದ ಮುಕ್ತವಾಗಿ ಜೀವನ ಪಾವನಗೊಳಿಸಬೇಕು ಎಂಬ ಸಂಕಲ್ಪದೊಂದಿಗೆ ಪ್ರಥಮ ಹೆಜ್ಜೆ ಇಡಬೇಕಾಗಿದೆ.

ಆತ್ಮಾರ್ಥವಾದ ಪಶ್ಚಾತಾಪ ನಮ್ಮದಾಗಿಬೇಕು. ತೌಬ ಕಡ್ಡಾಯ ಎಂಬುದಕ್ಕೆ ಕುರ್‌ ಆನ್ ಹದೀಸ್ ಹಾಗೂ ಇಜ್‌ ಮಾಗಳ ಪುರಾವೆಗಳು ಸ್ಪಷ್ಟವಾಗಿವೆ. ಅಲ್ಲಾಹನು ಹೇಳುತ್ತಾನೆ ‘‘ಓ ಸತ್ಯವಿಶ್ವಾಸಿಗಳೇ ನೀವೆಲ್ಲ ತೌಬಾ ಮಾಡಿರಿ. ನೀವು ಜಯಶೀಲರಾಗಬಹುದು.’’ (ಪವಿತ್ರ ಕುರ್‌ ಆನ್-ಅನ್ನೂರು: 31)

‘‘ನಿಮ್ಮ ಪ್ರಭುವಿನಲ್ಲಿ ಕ್ಷಮೆ ಯಾಚಿಸಿರಿ ನಂತರ ಅಲ್ಲಾಹನಲ್ಲಿ ಖೇದ ಪಟ್ಟು ಮರಳಲಿ’’ (ಪವಿತ್ರ ಕುರ್‌ಆನ್: ಹೂದ್: 3)

‘‘ಸತ್ಯ ವಿಶ್ವಾಸಿಗಳೇ! ಅಲ್ಲಾಹನತ್ತ ಪಶ್ಚಾತಾಪ ಪಟ್ಟು ಮರಳಿರಿ. ಆತ್ಮಾರ್ಥವಾದ ಪಶ್ಚಾತಾಪ ಪಡಿರಿ’’ (ಪವಿತ್ರ ಕುರ್‌ ಆನ್: ಅತ್ತಹರೀಮ್: 8)

ಪ್ರವಾದಿ (ಸ) ಹೇಳುತ್ತಾರೆ ‘‘ ನಾನು ಅಲ್ಲಾಹನಲ್ಲಿ ದಿನಕ್ಕೆ ಎಪ್ಪತ್ತಕ್ಕಿಂತಲೂ ಹೆಚ್ಚು ಬಾರಿ ಕ್ಷಮೆಯಾಚನೆ ಹಾಗೂ ತೌಬಾ ಮಾಡುತ್ತಿದ್ದೇನೆ’’. (ಬುಖಾರಿ)

ಪಾಪ ಮುಕ್ತರಾದ ಪ್ರವಾದಿ ಶ್ರೇಷ್ಠರೇ ದಿನಕ್ಕೆ ಅಷ್ಟು ಬಾರಿ ತೌಬಾ ಮಾಡುತ್ತಿದ್ದರೆ ನಾವೆಲ್ಲ ಯಾವ ರೀತಿ ಮಾಡಬೇಕೆಂಬುದನ್ನು ಊಹಿಸಬಹುದಾಗಿದೆ.

ಪ್ರವಾದಿ(ಸ) ಹೇಳಿದರು ‘‘ನಿರ್ಜನ ಭೂಮಿಯಲ್ಲಿ ನಾಪತ್ತೆಯಾದ ಒಂಟೆ ಮರಳಿ ಬಂದಾಗ ಎಷ್ಟು ಆನಂದವಾಗುವುದೋ ಅದಕ್ಕಿಂತ ಹೆಚ್ಚು ಆನಂದವು ದಾಸನು ತೌಬಾ ಮಾಡುವಾಗ ಅಲ್ಲಾಹನಿಗೆ ಉಂಟಾಗುತ್ತದೆ.’’ (ಬುಖಾರಿ ಮುಸ್ಲಿಮ್)

ಹೀಗೆ ತೌಬಾದ ಬಗ್ಗೆ ಕುರ್‌ ಆನ್ ಹದೀಸ್‌ ಗಳಲ್ಲೇ ಧಾರಾಳವಾಗಿ ಹೇಳಿರುವಾಗ ಅದನ್ನು ಗರಿಷ್ಠ ಪ್ರಮಾಣದಲ್ಲಿ ಆತ್ಮಾರ್ಥವಾಗಿ ನಿರ್ವಹಿಸಲು ನಾವು ಬದ್ಧರಾಗಬೇಕಾಗಿದೆ.

ಸಮಯವೆಂಬುದು ಬೇಕಾಬಿಟ್ಟಿ ಖರ್ಚು ಮಾಡುವಂತದ್ದಲ್ಲ. ಅದರಲ್ಲೂ ರಮಝಾನಿನಲ್ಲಿ ಪ್ರತೀ ಕ್ಷಣವೂ ಪೋಲು ಮಾಡಲಾರೆನೆಂಬಂತೆ ಅಂದಂದು ನಿರ್ವಹಿಸುವ ಕಾರ್ಯಗಳ ಬಗ್ಗೆ ವೇಳಾಪಟ್ಟಿಯನ್ನು ನಿಗದಿಪಡಿಸಬೇಕು. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಇವುಗಳಲ್ಲಿ ನಿರ್ವಹಿಸಬೇಕಾದ ಆರಾಧನೆಗಳು ಹಾಗೂ ಕೆಲಸ ಕಾರ್ಯಗಳು ಹಾಗೂ ನಮಾಝ್ ಫರ್‌ ಳ್, ಸುನ್ನತ್‌ ಗಳು ಹಾಗೂ ದ್ಸಿಕ್ರ್, ತಸ್ಬೀಹ್, ತಹ್‌ಲೀಲ್, ಇಸ್ತಿಗ್‌ ಫಾರ್, ಕುರ್‌ ಆನ್ ಪಾರಾಯಣ ಹಾಗೂ ಅರ್ಥಸಹಿತ ಕಲಿಯುವಿಕೆ ಇವುಗಳಲೆಲ್ಲಾ ಉತ್ತಮ ಗುಣಮಟ್ಟ ಕಾಯ್ದುಕೊಂಡು ಇವುಗಳನ್ನೆಲ್ಲಾ ಚಾಚೂ ತಪ್ಪದೆ ನಿರ್ವಹಿಸುವ ದೃಢ ನಿರ್ಧಾರ ಅದಕ್ಕೆಲ್ಲಾ ಇಂತಿಷ್ಟು ಸಮಯಗಳ ಮೀಸಲಿಡುವಿಕೆ ಜೊತೆಗೆ ನಿದ್ದೆಗೆ ಮತ್ತು ಅಡುಗೆ ಮನೆಯ ಕೆಲಸ ಕಾರ್ಯಗಳಲ್ಲಿ ಅಮ್ಮನಿಗೆ ಹಾಗೂ ಪತ್ನಿಗೆ ಸಹಾಯ ಮಾಡಲು ಬೇಕಾದ ಸಮಯ, ಹೀಗೆ ಸಮಯವನ್ನು Engaged ಆಗಿ ಹೊಂದಿಸಿಕೊಂಡರೆ ಸಮಯ ಪೋಲಾಗುವುದನ್ನು ಕೂಡ ತಪ್ಪಿಸಬಹುದು. ಜೊತೆಗೆ ಉಲ್ಲಾಸದಿಂದಲೂ, ಉತ್ಸಾಹದಿಂದಲೂ ಇರಲು ಇದು ಸಹಕಾರಿಯಾಗುತ್ತದೆ. ಮುಖ್ಯವಾಗಿ ಆಹಾರ, ಪಾನೀಯಗಳಲ್ಲಿ ಸರಳತೆ ಪಾಲಿಸುವುದು ಕೂಡ ಉಲ್ಲಾಸದಿಂದಿರಲು ಸಹಾಯಕವಾಗುತ್ತದೆ. ಜೊತೆಗೆ ಮಹಿಳೆಯರು ಇಡೀ ದಿನ ಅಡುಗೆ ಮನೆಯಲ್ಲೇ ಝಂಡ ಊರುವುದನ್ನು ಕೂಡ ತಪ್ಪಿಸುತ್ತದೆ. ತರಾವರಿ ತಿಂಡಿ ತಿನಿಸುಗಳ ತಯಾರಿ ಮತ್ತು ಯುಟ್ಯೂಬಲ್ಲಿ ಅದಕ್ಕಾಗಿ ಅನ್ವೇಷಣೆ ಇದನ್ನೆಲ್ಲಾ ನಿರ್ವಹಿಸಲು ರಮಝಾನ್ ಆಗತವಾದದ್ದಲ್ಲ ಎಂದು ಮಹಿಳೆಯರು ಮನಗಂಡು ಆರಾಧನೆಗಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದೆ.

ನಾವು ತಯಾರಿಸುವ, ನಾವು ಸೇವಿಸುವ ಆಹಾರ ಉಪವಾಸಕ್ಕೆ ಚೈತನ್ಯ ಒದಗಿಸುವಂತಿದೆಯಾ ಎಂದು ಯೋಚಿಸಬೇಕಾಗಿದೆ. ಈ ಬಾರಿಯ ರಮಝಾನ್ ಏಪ್ರಿಲ್‌ ನಲ್ಲಿ ಬಂದುದರಿಂದ ಹೆಚ್ಚು ಕರಿದ ಹುರಿದ ತಿಂಡಿಗಳಿಂದ ದೂರವಿದ್ದು ಸೊಪ್ಪು ತರಕಾರಿಗಳು, ಹಣ್ಣು ಹಂಪಲುಗಳು, ನೀರು ದ್ರವ ಪದಾರ್ಥಗಳು ಯಥೇಚ್ಛವಾಗಿರುವಂತೆ ನೋಡಿಕೊಳ್ಳಬೇಕಾಗಿದೆ. ಅಂತೆಯೇ ಹೆಸರು ಕಾಳಿನ ನೀರು, ಮೆಂತೆ ಗಂಜಿ, ರಾಗಿ ಶರ್ಬತ್, ರಾಗಿ ಮಣ್ಣಿ ಮುಂತಾದವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆ ಮಲಬದ್ಧತೆಯ ಉರಿ ನೋವು ಮತ್ತು ಫೈಲ್ಸ್, ಪಿಸ್ತೂಲಗಳ ತೊಂದರೆಯಿಂದಲೂ ತಪ್ಪಿಸಬಹುದು. ನೀರಿನಂಶ ದೇಹದಲ್ಲಿ ಕಡಿಮೆಯಾದರೆ ಉರಿ ಮೂತ್ರ, ಮೂತ್ರದ ಬಣ್ಣದಲ್ಲಿ ಬದಲಾವಣೆ (ಕೆಂಪು, ಹಳದಿ) ಮುಂತಾದ ಸಮಸ್ಯೆಗಳು ತಲೆದೋರುತ್ತವೆ. ಅದಕ್ಕಾಗಿ ನಮ್ಮ ಆಹಾರದಲ್ಲಿ ಬಾಯಿ ಚಪಲಕ್ಕೆ ಆಸ್ಪದ ಕೊಡದೆ ಶರೀರದ ಸ್ವಸ್ಥತೆಯ ಕಡೆಗೆ ಗಮನಹರಿಸಬೇಕಾಗಿದೆ. ಹೆಚ್ಚಿನವರು ಹಳೇ ಕಾಲದ ತಿಂಡಿ ತಿನಿಸುಗಳನ್ನು ಮಕ್ಕಳು ಮೂಸಿಯೂ ನೋಡುವುದಿಲ್ಲ ಎಂಬ ಸಬೂಬಿನೊಂದಿಗೆ ಪಿಝ್ಝಾ, ಬರ್ಗರ್, ಶವರ್ಮ ಮುಂತಾದ ಮೈದಾ ಹಿಟ್ಟಿನ ತಿಂಡಿಗಳನ್ನೇ ಯಥೇಚ್ಛ ತಯಾರಿಸುವವರಿದ್ದಾರೆ. ಉಪವಾಸ ತೊರೆಯುವಾಗ ಸಮೋಸ, ಕಟ್ಲೆಟ್, ಕಬಾಬ್, ರೋಲ್‌ ಗಳನ್ನು ಇತ್ತೀಚಿಗೆ ಕಡ್ಡಾಯಗೊಳಿಸಿದಂತೆ ಅದನ್ನೂ ಈ ಪಟ್ಟಿಗೆ ಸೇರಿಸಿಕೊಳ್ಳುವ ಹುನ್ನಾರವೂ ನಡೆಯುತ್ತಿರುತ್ತದೆ. ಬದುಕುವುದಕ್ಕಾಗಿ ತಿನ್ನುವುದು ಎಂಬಂತಿರದೆ ತಿನ್ನಲಿಕ್ಕಾಗಿಯೇ ಬದುಕುವುದು ಎಂಬಂತಿರಬಾರದು. ‘‘ಆರೋಗ್ಯಕರ ಶರೀರದಿಂದಷ್ಟೇ ಆರೋಗ್ಯಕರ ಮನಸ್ಸು ಇರುತ್ತದೆ. ಇದರಿಂದಷ್ಟೇ ನಾವು ನಡೆಸುವ ಆರಾಧನೆ ಹಾಗೂ ಇನ್ನಿತರ ಕೆಲಸ ಕಾರ್ಯಗಳು ಸ್ಫೂರ್ತಿದಾಯಕವಾಗಿ ಸಫಲತೆಯನ್ನು ಕಾಣಲು ಸಾಧ್ಯ. ಕನಿಷ್ಠ ಆಹಾರ ಸೇವನೆ ಗರಿಷ್ಠ  ಆರಾಧನೆ ಎಂಬುವುದೇ ನಮ್ಮ ಧ್ಯೇಯವಾಗಿದ್ದು ಅದಕ್ಕಾಗಿ ಪ್ರಯತ್ನಿಸಬೇಕಾಗಿದೆ’’.

ಪ್ರವಾದಿ (ಸ) ಹೇಳಿದರು; ‘‘ಸ್ವಶರೀರವನ್ನು ನಿಯಂತ್ರಿಸಿಕೊಂಡವನು ಹಾಗೂ ಮರಣಾ ನಂತರಕ್ಕೆ ಪುಣ್ಯಗಳನ್ನು ಮಾಡಿಕೊಂಡವನೇ ಬುದ್ಧಿವಂತನು. ದೇಹದಾಸೆ ಪ್ರಕಾರ ಜೀವಿಸಿ ಅಲ್ಲಾಹನಿಂದ ವ್ಯಾಮೋಹ ಇಟ್ಟುಕೊಂಡವನೇ ದುರ್ಬಲನು’’ ಎಂದು ಈ ಹದೀಸನ್ನು ಜ್ಞಾಪಕದಲ್ಲಿಟ್ಟುಕೊಂಡರೆ ದೇಹದಾಸೆಯ ತ್ಯಜಿಸುವಿಕೆಗೆ ಸ್ಫೂರ್ತಿ ದೊರೆಯುತ್ತದೆ.

ಶರೀರದ ಜಡತ್ವ ನೀಗಲು ಮಾಡುವ ಮತ್ತೊಂದು ಕಾರ್ಯವೆಂದರೆ ಕಷ್ಟದಲ್ಲಿದ್ದವರಿಗೆ ಸಹಾಯ ಸಹಕಾರ. ಇಬ್‌ ನು ಉಮರ್ ವರದಿ ಮಾಡಿದ, ಬುಖಾರಿ ಮುಸ್ಲಿಮ್ ಉಲ್ಲೇಖಿತ ಹದೀಸ್ ಒಂದು ಹೀಗಿದೆ ‘‘ಮುಸ್ಲಿಮನು ಮತ್ತೊಬ್ಬ ಮುಸ್ಲಿಮನ ಸೋದರನು. ಅವನಿಗೆ ಅಕ್ರಮವೆಸಗಬಾರದು. ಒಬ್ಬನು ಇನ್ನೊಬ್ಬರ ಅಗತ್ಯ ಪೂರೈಸುವಾಗ ಇವನ ಅಗತ್ಯವನ್ನು ಅಲ್ಲಾಹನು ಪೂರೈಸುತ್ತಾನೆ. ಒಬ್ಬ ಮುಸ್ಲಿಮನ ಒಂದು ಪ್ರಯಾಸವನ್ನು ಪರಿಹರಿಸಿದರೆ ಪುನರುತ್ಥಾನ ದಿನದಂದು ಒಂದು ಪ್ರಯಾಸವನ್ನು ಅಲ್ಲಾಹನು ಇವನಿಗೆ ಪರಿಹರಿಸುವನು. ಒಬ್ಬ ಮುಸ್ಲಿಮನ ಲೋಪವನ್ನು ಮರೆಮಾಚಿದರೆ ಪರಲೋಕದಲ್ಲಿ ಅವನ ಲೋಪವನ್ನು ಅಲ್ಲಾಹನು ಮರೆಮಾಚುವನು’’ ಎಂದು ಇದು ಇನ್ನೊಬ್ಬರಿಗೆ ಸಹಾಯ ಸಹಕಾರ ಕೊಡಲು ನಿರ್ದೇಶಿಸುವುದರ ಜೊತೆಗೆ ಇನ್ನೊಬ್ಬರ ಅವಹೇಳನ ಗೊಳಿಸುವುದಕ್ಕೂ ಎಚ್ಚರಿಕೆಯಂತಿದೆ.

ರಮಝಾನ್ ನಮ್ಮ ಜೀವನದ ತರಬೇತಿಯ ತಿಂಗಳಾಗಿದೆ. ಈ ತಿಂಗಳಲ್ಲಿ ಪಡೆಯುವ ದೇವಭಕ್ತಿಯೂ, ಆತ್ಮಸಂಸ್ಕರಣೆಯೂ ನಂತರ ಜೀವನದಲ್ಲಿ ಶಕ್ತಿ ಹಾಗೂ ಉತ್ಸಾಹವನ್ನು ತುಂಬುತ್ತದೆ. ದೇವ ಭಯದಿಂದ ಒಂದು ಹನಿ ನೀರನ್ನು ಸೇವಿಸದಿರಲು ಸಾಧ್ಯವಾಗುವುದಾದರೆ ದೇವನ ಇಚ್ಛೆಗೆ ವಿರುದ್ಧವಾದ ಯಾವುದೂ ನಮ್ಮ ಜೀವನದಲ್ಲಿ ನಡೆಯದಿರಲು ಅಲ್ಲಾಹು ತೌಫೀಕ್ ನೀಡಲಿ.

Join Whatsapp