ಬೆಂಗಳೂರು: ಕರ್ನಾಟಕ ಸರ್ಕಾರದಿಂದ ನೇಮಿಸಲ್ಪಟ್ಟ ರೋಹಿತ್ ಚಕ್ರವರ್ತಿ ನೇತೃತ್ವದಲ್ಲಿರುವ ಪಠ್ಯ ಪರಿಷ್ಕರಣೆ ಸಮಿತಿಯ ನಡೆಗೆ ರಾಜ್ಯದೆಲ್ಲೆಡೆ ತೀವ್ರ ಅಕ್ರೋಶ ಮತ್ತು ಪ್ರತಿಭಟನೆ ವ್ಯಕ್ತವಾಗಿದೆ.
ಪಠ್ಯದಲ್ಲಿ ಹೆಡ್ಗೇವಾರ್ ಭಾಷಣ ಸೇರಿಸಿ ಮನುಸ್ಮೃತಿ ಹೇರಲಾಗುತ್ತಿದೆ ಎಂದು ಆರೋಪಿಸಿ ಜನರು ಬೀದಿಗಿಳಿದಿದ್ದಾರೆ.
ಆರೆಸ್ಸೆಸ್ ನ ಸಂಸ್ಥಾಪಕ ಹೆಡ್ಗೇವಾರ್ ಭಾಷಣವನ್ನು ಎಸ್.ಎಸ್.ಎಲ್.ಸಿಯ 2022 – 2023ನೇ ಸಾಲಿನ ಶೈಕ್ಷಣಿಕ ವರ್ಷದ ಕನ್ನಡ ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ. ಇದು ಶಿಕ್ಷಣವನ್ನು ಕೇಸರೀಕರಣಗೊಳಿಸುವ ಷಡ್ಯಂತ್ರ್ಯವಾಗಿದ್ದು, ಇದನ್ನು ತಕ್ಷಣ ಹಿಂಪಡೆಯುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯು, ಇಲ್ಲಿನ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಪ್ರತಿಭಟನೆ ಹಮ್ಮಿಕೊಂಡಿತ್ತು.
ದೇಶದೆಲ್ಲೆಡೆ ಹಿಂಸಾಚಾರದ ಮೂಲಕ ನರಮೇಧ ನಡೆಸಿದ ಮತ್ತು ಹಲವು ಬಾರಿ ನಿಷೇಧಕ್ಕೊಳಗಾದ ಆರೆಸ್ಸೆಸ್ ಸಂಘಟನೆಯ ಸಂಸ್ಥಾಪಕ ಹೆಡ್ಗೇವಾರ್ ಎಂಬಾತ ಆದರ್ಶ ಪುರುಷನಾಗಲು ಸಾಧ್ಯವೆಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ಈ ಮಧ್ಯೆ ಪ್ರಗತಿಪರ ಸಂಘಟನೆ ಒಕ್ಕೂಟದಿಂದ ಮೈಸೂರಿನ ಹುಣಸೂರಿನಲ್ಲಿ ಹೆಡ್ಗೇವಾರ್ ಭಾಷಣದ ಪಠ್ಯ ಪುಸ್ತಕಕ್ಕೆ ಬೆಂಕಿ ಹಚ್ಚುವ ಪ್ರತಿಭಟನೆ ನಡೆಸಲಾಗಿತ್ತು. ರೋಹಿತ್ ಚಕ್ರವರ್ತಿ ನೇತೃತ್ವದ ಪರಿಷ್ಕರಣಾ ಸಮಿತಿಯು ಮನುಸ್ಮೃತಿ ಮಾದರಿಯ ಪಠ್ಯವನ್ನು ರಚಿಸುವ ಮೂಲಕ ಇಲ್ಲಿನ ದಲಿತ, ಶೂದ್ರ ಮತ್ತು ಮಹಿಳೆಯರ ಬರಹಗಳಿಗೆ ಕೊಡಲಿಯೇಟು ನೀಡಲು ನಿರ್ಧರಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಹುಣಸೂರಿನ ಸಂವಿಧಾನ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ ಮತ್ತು ಪ್ರಗತಿಗಪರ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.