ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಲು  ಶೀಘ್ರ ಕಾನೂನು ಜಾರಿ: ಮಾಹಿತಿ ಮತ್ತು ಪ್ರಸಾರ ಸಚಿವ

Prasthutha|

ಜೈಪುರ: ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಲು ಹೊಸ ಕಾನೂನನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿ ಜಾರಿಗೆ ತರಲಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.

- Advertisement -

ಜೈಪುರದಲ್ಲಿ  ಪತ್ರಿಕೆಯೊಂದರ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಠಾಕೂರ್, ದೇಶದಲ್ಲಿನ ಡಿಜಿಟಲ್ ಮಾಧ್ಯಮಗಳ ನೋಂದಣಿ, ಕಾರ್ಯನಿರ್ವಹಣೆ ಹಾಗೂ ನಿಯಂತ್ರಣದ ಬಗ್ಗೆ ಹೊಸ ಕಾನೂನನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿ ಜಾರಿಗೆ ತರಲಿದೆ . ವಿಶೇಷವಾಗಿ ಡಿಜಿಟಲ್ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಪತ್ರಕರ್ತರಿಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ. ಕೋವಿಡ್‌ನಿಂದ ಮೃತಪಟ್ಟ ಎಲ್ಲ ಪತ್ರಕರ್ತರಿಗೆ ಪರಿಹಾರ ನೀಡುವ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದು  ಹೇಳಿದರು.

ಇನ್ನು ಮುಂದೆ ಪತ್ರಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು. ಕೇಂದ್ರ ಸರ್ಕಾರವು ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಕಾಯ್ದೆ 1867ರ  ಬದಲಿಗೆ ಹೊಸ ಕಾನೂನನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಇದರಿಂದ ಒಂದು ವಾರದಲ್ಲಿ ನೋಂದಣಿಗೆ ಅವಕಾಶ ನೀಡಲಾಗುವುದು. ಇದು ಸದ್ಯ ನಾಲ್ಕು ತಿಂಗಳು ತೆಗೆದುಕೊಳ್ಳುತ್ತದೆ. ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳನ್ನು ಒಂದೇ ಸೂರಿನಡಿ ತರಲಾಗುವುದು ಎಂದು ಭರವಸೆ ನೀಡಿದರು.

- Advertisement -

ಮಾಧ್ಯಮಗಳು ತನ್ನ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡಬೇಕು ಹಾಗೂ ಸರ್ಕಾರದ ಲೋಪದೋಷಗಳ ಜತೆಗೆ ಸರ್ಕಾರದ ಜನಕಲ್ಯಾಣ ಯೋಜನೆಗಳು, ನೀತಿಗಳು ಸಹ ಜನಸಾಮಾನ್ಯರಿಗೆ ತಲುಪಬೇಕು. ಅಲ್ಲದೆ,  ಸಮಾಜದಲ್ಲಿ ಭಯ ಮತ್ತು ಗೊಂದಲದ ವಾತಾವರಣ ನಿರ್ಮಾಣ ಮಾಡುವುದನ್ನು ತಪ್ಪಿಸಬೇಕು ಎಂದು ಕಿವಿಮಾತು ಹೇಳಿದರು.

Join Whatsapp