ಕವರತ್ತಿ: ದ್ವೀಪವಾಸಿಗಳ ಭಾರೀ ಹೋರಾಟದ ಎಚ್ಚರಿಕೆಯ ನಡುವೆ ಲಕ್ಷದ್ವೀಪದಲ್ಲಿ, ಮಾಲೀಕರಿಗೆ ಮಾಹಿತಿ ನೀಡದೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ದ್ವೀಪವಾಸಿಗಳು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಖಾಸಗಿ ಜಮೀನಿನಲ್ಲಿ ನೆಟ್ಟ ಧ್ವಜಗಳನ್ನು ತೆರವುಗೊಳಿಸಿದ್ದಾರೆ.
ಸುಮಾರು 20 ಜನರ ಖಾಸಗಿ ಜಮೀನಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನಿನ್ನೆ ಕೆಂಪು ಧ್ವಜವನ್ನು ನೆಟ್ಟಿದ್ದು, ಭೂಮಿಯನ್ನು ಏಕೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನೂ ಕೂಡಾ ಭೂ ಮಾಲೀಕರಿಗೆ ತಿಳಿಸಿರಲಿಲ್ಲ.
ಆಡಳಿತಾಧಿಕಾರಿ ಪ್ರಫುಲ್ ಕೆ. ಪಟೇಲ್ ಅವರ ವಿವಾದಾತ್ಮಕ ಸುಧಾರಣೆಗಳಲ್ಲಿ ಭೂಸ್ವಾಧೀನವೂ ಒಂದಾಗಿದ್ದು, ಲಕ್ಷದ್ವೀಪದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಭೂಸ್ವಾಧೀನಕ್ಕಾಗಿ 2021 ರ ಕರಡನ್ನು ಲಕ್ಷದ್ವೀಪ ಸರ್ಕಾರ ಬಿಡುಗಡೆ ಮಾಡಿತ್ತು. ನಿನ್ನೆ ಲಕ್ಷದ್ವೀಪಕ್ಕೆ ಆಗಮಿಸಿದ ಪ್ರಫುಲ್ ಖೋಡಾ ಪಟೇಲ್ ಅವರು ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಆಡಳಿತ ಸುಧಾರಣೆಗಳ ಅನುಷ್ಠಾನವನ್ನು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ನಂತರ ಕಂದಾಯ ಅಧಿಕಾರಿಗಳು ಲಕ್ಷದ್ವಿಪದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದಾರೆ.