ಲಕ್ಷದ್ವೀಪದಲ್ಲೂ ಗೋಹತ್ಯೆ ನಿಷೇಧ | ಜೀವಾವಧಿ ಶಿಕ್ಷೆ
Prasthutha: February 26, 2021

ಹೊಸದಿಲ್ಲಿ : ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಗೋಮಾಂಸ ನಿಷೇಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಶಿಫಾರಸುಗಳನ್ನು ಒಳಗೊಂಡ ಕರಡು ಕಾನೂನನ್ನು ಸರ್ಕಾರ ಬಿಡುಗಡೆ ಮಾಡಿದೆ. ಲಕ್ಷದ್ವೀಪ ಪಶುಸಂಗೋಪನಾ ನಿಯಂತ್ರಣ ಕಾಯ್ದೆ -2021 ರ ಕರಡು ಪ್ರಕಾರ, ಗೋಹತ್ಯೆಗೆ 10 ವರ್ಷದಿಂದ ಜೀವಾವಧಿ ಶಿಕ್ಷೆ ತನಕ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
ಕಾನೂನಿನ ಪ್ರಕಾರ, ಹಸುಗಳು ಮತ್ತು ಎತ್ತುಗಳನ್ನು ವಧಿಸುವುದು ಮತ್ತು ಗೋಮಾಂಸ ಹೊಂದಿರುವುದು ಅಪರಾಧ. ಗೋಮಾಂಸ ಮತ್ತು ಗೋಮಾಂಸ ಉತ್ಪನ್ನಗಳನ್ನು ಸಾಗಿಸುವ ವಾಹನಗಳನ್ನು ವಶಪಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಸುಮಾರು 90% ಮುಸ್ಲಿಮರು ವಾಸಿಸುವ ಸಣ್ಣ ದ್ವೀಪವಾಗಿದೆ ಲಕ್ಷದ್ವೀಪ. ಇಲ್ಲಿನ ಅಧಿಕೃತ ಭಾಷೆ ಮಲಯಾಳಂ.
ಅದೇ ವೇಳೆ, ಕರಡು ಕಾನೂನಿನ ಪ್ರಕಾರ ದನ ಮತ್ತು ಎಮ್ಮೆಗಳನ್ನು ವಧಿಸಲು ವಿಶೇಷ ಅನುಮತಿ ಪಡೆಯಬೇಕು. ಕರಡು ಕಾನೂನನ್ನು ಸರ್ಕಾರದ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಪ್ರಕಟಿಸಲಾಗಿದೆ. ಮಾರ್ಚ್ 28 ರೊಳಗೆ ಇ-ಮೇಲ್ ಅಥವಾ ಅಂಚೆ ಮೂಲಕ ಆಕ್ಷೇಪಣೆಗಳನ್ನು ನೀಡಬಹುದು ಎಂದು ಪಶು ಸಂಗೋಪನಾ ಇಲಾಖೆಯ ಕಾರ್ಯದರ್ಶಿ ಎ.ಟಿ.ದಾಮೋದರ್ ತಿಳಿಸಿದ್ದಾರೆ.
