ಲಕ್ನೋ: ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ನಿಯೋಗ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಹಿರಿಯ ಕಾಂಗ್ರೆಸ್ ನಾಯಕರ ನಿಯೋಗ ಲಖಿಂಪುರ ಖೇರಿ ಘಟನೆಯ ವಾಸ್ತವಾಂಶವನ್ನು ಒಳಗೊಂಡ ಪತ್ರವನ್ನು ರಾಷ್ಟ್ರಪತಿಯವರಿಗೆ ನೀಡಿತು.
ಪ್ರಸ್ತುತ ಲಖಿಂಪುರ ಘಟನೆಯ ಆರೋಪಿಯ ತಂದೆ ಅಜಯ್ ಮಿಶ್ರಾ ಕೇಂದ್ರ ಸಚಿವರಾಗಿದ್ದು, ಅವರ ಸಮ್ಮುಖದಲ್ಲಿ ನ್ಯಾಯಯುತ ತನಿಖೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ನಡೆಸಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದರು.ಈ ಸಂಬಂಧ ಸರ್ಕಾರದೊಂದಿಗೆ ಚರ್ಚಿಸುವುದಾಗಿ ರಾಷ್ಟ್ರಪತಿಗಳು ನಿಯೋಗಕ್ಕೆ ಭರವಸೆ ನೀಡಿದರು.
ನಿಯೋಗದಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಎ.ಕೆ ಆಂಟನಿ, ಗುಲಾಂ ನಬಿ ಆಜಾದ್, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತಿತರರು ಇದ್ದರು.
ಖಲಿಂಪುರ ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಈಗಾಗಲೇ ಅಶಿಶ್ ಮಿಶ್ರಾ ಅವರನ್ನು ಬಂಧಿಸಲಾಗಿತ್ತು.