ಕಾಂಗ್ರೆಸ್ ಅಕ್ರಮ ನಡೆಸಿ ಚುನಾವಣೆ ಗೆದ್ದಿದೆ: ಕುಮಾರಸ್ವಾಮಿ ಗಂಭೀರ ಆರೋಪ

Prasthutha|

ಬೆಂಗಳೂರು: ಸುಳ್ಳು ಗ್ಯಾರಂಟಿಗಳ ಜತೆಗೆ ಅಕ್ರಮವಾಗಿ ಕೂಪನ್ ಗಳನ್ನು ಹಂಚಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದಲ್ಲಿ 45ರಿಂದ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಗೆದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಮಿಸ್ಟರ್ ಸಿದ್ದರಾಮಯ್ಯ ಧೈರ್ಯ ಇದ್ದರೆ ಈ ಅಕ್ರಮವನ್ನು ತನಿಖೆಗೆ ಒಳಪಡಿಸಿ ಎಂದು ಅವರು ಒತ್ತಾಯ ಮಾಡಿದರು.

- Advertisement -

ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಕಾಂಗ್ರೆಸ್ ಪಕ್ಷವು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಹಂಚಿದ ಕ್ಯೂ ಆರ್ ಕೊಡ್ ಗಳು ಉಳ್ಳ ಈ ಕೂಪನ್ ಗಳೇ ಕಾರಣ. ಇದು ಗಂಭೀರ ಸ್ವರೂಪದ ಚುನಾವಣೆ ಅಕ್ರಮ ಎಂದು ದೂರಿದರು.

ಮೂರು ಸಾವಿರ ಹಾಗೂ ಐದು ಸಾವಿರ ಮೊತ್ತದ ಕ್ಯೂ ಆರ್ ಕೋಡ್ ಗಳನ್ನು ಹೊಂದಿರುವ ಕೂಪನ್ ಗಳನ್ನು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಮತದಾರರಿಗೆ ಹಂಚಲಾಯಿತು. ಈ ಕೂಪನ್ ಗಳಿಂದಲೇ ನಾವು ಸೋಲಬೇಕಾಯಿತು. ಕಾಂಗ್ರೆಸ್ ಅಕ್ರಮವಾಗಿ ಗೆದ್ದಿದೆ. ಈ ಬಗ್ಗೆ ತನಿಖೆ ಮಾಡಿಸುತ್ತೀರಾ ಮಿಸ್ಟರ್ ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಅವರು ಕಿಡಿಕಾರಿದರು.

ಹೀಗೆ ಕೂಪನ್ ಗಳನ್ನು ಹಂಚಲು ಕಾಂಗ್ರೆಸ್ ಅಭ್ಯರ್ಥಿಗಳು ಹಣ ಎಲ್ಲಿಂದ ತಂದರು? ಕಾಂಗ್ರೆಸ್ ಅಭ್ಯರ್ಥಿ ಗೆದ್ದರಷ್ಟೇ ಈ ಕೂಪನ್ ನಗದಾಗುತ್ತದೆ. ಆಗ ಕೂಪನ್ ಹೊಂದಿರುವವರು ನಿಗದಿತ ಮಾಲ್ ಅಥವಾ ಅಂಗಡಿಗೆ ಹೋಗಿ ಕೂಪನ್ ನಲ್ಲಿ ನಿಗದಿತ ಮೊತ್ತದ ವಸ್ತುಗಳನ್ನು ಖರೀದಿ ಮಾಡಬಹುದು ಎಂದು ಆಮಿಷ ಒಡ್ಡಲಾಗಿದೆ. ಇದು ಚುನಾವಣೆಯ ಮಹಾ ಅಕ್ರಮ. ಈ ಬಗ್ಗೆ ಚುನಾವಣೆ ಆಯೋಗ ತನಿಖೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.

ರಾಮನಗರ, ಮಾಗಡಿ, ರಾಜರಾಜೇಶ್ವರಿ ನಗರ ಸೇರಿದಂತೆ ರಾಜ್ಯದ 45ರಿಂದ 50 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈ ರೀತಿಯ ಅಕ್ರಮ ಮಾಡಿದೆ. ಬಿಜೆಪಿ ಸರಕಾರದ ಅಕ್ರಮಗಳನ್ನು ತನಿಖೆ ಮಾಡಿಸುವೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಈ ಕೂಪನ್ ಅಕ್ರಮದ ಬಗ್ಗೆ ತನಿಖೆ ಮಾಡಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಸುಮಾರು ನಲವತ್ತೆರಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ಗಿಫ್ಟ್ ಕೂಪನ್ ಹಂಚಿದ್ದಾರೆ. ಆ ಕೂಪನ್ ಕೊಟ್ಟರೆ, ಮೂರು, ಐದು ಸಾವಿರ ಬೆಲೆಯ ವಸ್ತುಗಳು ಸಿಗುತ್ತೆ  ಅಂತ ಆಸೆ ಹುಟ್ಟಿಸಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಸುಮಾರು ಅರವತ್ತು ಸಾವಿರ ಕೂಪನ್ ಹಂಚಿದ್ದಾರೆ ಎಂದ ಮಾಜಿ ಮುಖ್ಯಮಂತ್ರಿ ಅವರು, ಮಾಧ್ಯಮಗೋಷ್ಠಿಯಲ್ಲಿ ಗಿಫ್ಟ್ ಕೂಪನ್ ಗಳನ್ನು ಪ್ರದರ್ಶನ ಮಾಡಿದರು.

ಮಹಾತ್ಮ ಗಾಂಧೀಜಿ ಹೆಸರು ಹೇಳುವ, ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಅತ್ಯಂತ ಕೀಳು ಕೆಲಸ ಮಾಡಿದೆ. ಆ ಪಕ್ಷಕ್ಕೆ ನೈತಿಕತೆ ಎನ್ನುವುದು ಇದೆಯಾ ಎಂದು ಅವರು ಪ್ರಶ್ನೆ ಮಾಡಿದರು.

ನಮ್ಮ ಬಗ್ಗೆ ಕಾಂಗ್ರೆಸ್ ಒಂದು ಟ್ವೀಟ್ ಮಾಡಿದೆ. ಗ್ಯಾರಂಟಿ ಕಾರ್ಯಕ್ರಮಗಳನ್ನು ಈಡೇರಿಸುವುದು ಇರಲಿ, ನೀವು ಪಕ್ಷ ವಿಸರ್ಜನೆ ಯಾವಾಗ ಮಾಡ್ತೀರಾ ಅಂತಾ ಕೇಳಿದೆ. ಹಿಂದೆ ಒಂದು ಚುನಾವಣೆಯಲ್ಲಿ 179 ಸ್ಥಾನದಿಂದ 39 ಸ್ಥಾನಕ್ಕೆ ಇಳಿದಾಗ ಕಾಂಗ್ರೆಸ್ ನಾಯಕರು ಪಕ್ಷ ವಿಸರ್ಜನೆ ಮಾಡಿದ್ದರಾ? ಕಾಲಚಕ್ರ ತಿರುಗುತ್ತೆ, ಮೇಲೆ ಇದ್ದವನು ಕೆಳಗೆ ಇಳಿಬೇಕು, ಕೆಳಗಿದ್ದವನು ಮೇಲೆ ಬರಬೇಕು. ಈ ದುರಹಂಕಾರದ ಮಾತು ಬೇಡ. ಪಕ್ಷ ವಿಸರ್ಜನೆ ಮಾಡುವುದು, ಅಂತ್ಯಸಂಸ್ಕಾರ ಮಾಡುವುದು ಇದೆಲ್ಲಾ ನಾನು ನಿಮ್ಮಿಂದ ಕಲೀಬೇಕಿಲ್ಲ ಎಂದು ಅವರು ಕಿಡಿಕಾರಿದರು.

ನನಗೆ 123 ಸೀಟು ಬಂದು ಪಂಚರತ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದೆ. ಆ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಬೇರೆ ರೀತಿ ಕೇಳಿಸಿದೆ. ಒಮ್ಮೆ ಅವರು ನನ್ನ ಹೇಳಿಕೆಯನ್ನು ಮತ್ತೆ ಕೇಳಿಸಿಕೊಳ್ಳಲಿ. ನಾನು ಹೇಳಿದ್ದು ಏನು ಎಂಬುದು ಅರ್ಥ ಆಗುತ್ತದೆ. ಅವರಂಥ ಕುತಂತ್ರದ ರಾಜಕಾರಣ ಮಾಡಿ, ನಾವು ಪಕ್ಷ ಕಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ಗೆದ್ದರು ಅನ್ನೋದಕ್ಕಿಂತ ಒಟ್ಟಾರೆ ಗೆದ್ದರು ಅನ್ನುವುದೇ ಮುಖ್ಯ. ಈ ನಾಡಿನ ಜನರ ಮುಂದೆ ಮನವಿ ಮಾಡ್ತೀನಿ. ಒಪ್ಪತ್ತು ಹೊತ್ತಿನ ಊಟದ ಆಸೆಗೆ ನಿಮ್ಮ ಮುಂದಿನ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಒಂದೆರಡು ಸಾವಿರ ಹಣದಿಂದ ನಿಮ್ಮ ಬದುಕು ಸರಿ ಹೋಗುವುದಿಲ್ಲ ಎಂದು ಜನತೆಗೆ ಅವರು ಕಿವಿಮಾತು ಹೇಳಿದರು.

ರಾಜ್ಯಾಧ್ಯಕ್ಷರಾಗಿ ಇಬ್ರಾಹಿಂ ಮುಂದುವರಿಕೆ

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಸಿಎಂ ಇಬ್ರಾಹಿಂ ಮುಂದುವರಿಯುತ್ತಾರೆ. ಚುನಾವಣೆ ಸೋಲಿನ ಹೊಣೆ ಹೊತ್ತು ಸಿಎಂ ಇಬ್ರಾಹಿಂ ರಾಜೀನಾಮೆ ಕೊಟ್ಟಿದ್ದಾರೆ. ಅವರನ್ನು ಮುಂದುವರೆಸಬೇಕಾ, ಬೇಡವಾ ಅಂತ ನಾವು ನಿರ್ಧಾರ ಮಾಡುತ್ತೇವೆ. ಅವರ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಆದರೆ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಯುವ ಜನತಾದಳ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ನೀಡಿದ್ದಾರೆ. ಅವರ ರಾಜಿನಾಮೆ ಕೂಡಾ ಅಂಗೀಕಾರ ಆಗಿಲ್ಲ. ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೂ ಯಾರನ್ನು ನೇಮಿಸಬೇಕು ಅಂತಾ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದಾಗ ಮಧ್ಯಪ್ರವೇಶ ಮಾಡಿದ ಸಿಎಂ ಇಬ್ರಾಹಿಂ ಅವರು; ನಿಖಿಲ್ ಅವರೂ ಕೂಡ ಮುಂದುವರಿಯುತ್ತಾರೆ ಎಂದು ತಿಳಿಸಿದರು.

ಈ ಐದು ಗ್ಯಾರಂಟಿ ಗಳನ್ನು ಕಾಂಗ್ರೆಸ್ ಜಾರಿಗೆ ತರಲು ಕಷ್ಟ. ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಅವರಿಂದ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯ ಇಲ್ಲ. ಸಿದ್ದರಾಮಯ್ಯ ಅವರು ಚುನಾವಣೆಗೆ ಮುನ್ನ  ಭಾಷಣದಲ್ಲಿ ಎಲ್ಲರಿಗೂ ಫ್ರೀ ಅಂತಾ ಹೇಳ್ತಾ ಇದ್ದರು. ಬಸ್ ಪಾಸ್ ಎಲ್ಲಾ ಕಡೆ ಫ್ರೀ ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಮೊದಲ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿಗಳನ್ಹು ಜಾರಿ ಮಾಡುತ್ತೇವೆ ಎಂದು ಅವರು ಹೇಳಿದ್ದರು. ಆದರೆ, ಅವರು ಮಾತು ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಈ ವಿಚಾರದಲ್ಲಿ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಜನ ಏನು ತೀರ್ಮಾನ ತೆಗೆದುಕೊಳ್ತಾರೋ ಗೊತ್ತಿಲ್ಲ. ನಾವಂತೂ ಹೋರಾಟ ಮಾಡಲು ಸಿದ್ದ.‌ ಜನರಿಗೆ ತಮಗೆ ಅನ್ಯಾಯ ಆಗಿದೆ ಎಂದರೆ ನಮ್ಮ ಜತೆ ಕೈಜೋಡಿಸಲಿ ಎಂದು ಅವರು ಹೇಳಿದರು.

- Advertisement -