ಕೊಡಗು: ಭಾರೀ ಮಳೆಯಿಂದ ಕುಸಿಯುತ್ತಿರುವ ಮನೆಗಳು

Prasthutha|

ಮಡಿಕೇರಿ: ಸೋಮವಾರಪೇಟೆ ತಾಲೂಕಿನಾದ್ಯಂತ  ಮಳೆಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ದಿನದಿಂದ ದಿನಕ್ಕೆ ಹಾನಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

- Advertisement -

ಕೆಲವು ಸಮಯ ಕೊಂಚ ಬಿಡುವು ನೀಡುತ್ತಿದ್ದ ವರುಣ 2 ದಿನದಿಂದ ಮತ್ತೆ ತನ್ನ ಆರ್ಭಟ ಮುಂದುವರಿಸಿದ್ದು ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಕೆಲವೆಡೆ ಮನೆಗಳು ಶೀತ ಹೆಚ್ಚಾಗಿ ಕುಸಿಯುತ್ತಿದ್ದರೆ,ಇನ್ನೊಂದೆಡೆ ಭಾರಿ ಗಾಳಿಯಿಂದ ಮರಗಳು ಮನೆಯ ಮೇಲೆ ಬೀಳುತ್ತಿವೆ. ನಗರ ಸಮೀಪದ ಮಾಟ್ನಳ್ಳಿ ಗ್ರಾಮದ ಪುಟ್ಟಯ್ಯ ಎಂಬುವವರ ಮನೆಯ ಒಂದು ಗೋಡೆ ಕುಸಿದಿದ್ದು ಸುಮಾರು 25 ಸಾವಿರ ನಷ್ಟ ಉಂಟಾಗಿದೆ ಎಂದು ಕಂದಾಯ ಇಲಾಖಾಧಿಕಾರಿಗಳು ವರದಿ ನೀಡಿದ್ದಾರೆ.

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ 3 ರ ವಲ್ಲಭಾಯಿ ರಸ್ತೆಯಲ್ಲಿ ವಾಸವಾಗಿರುವ ಮಹದೇವಮ್ಮ ಎಂಬವರಿಗೆ ಸೇರಿದ ಮನೆ ಮಳೆಯಿಂದ ಶಿಥಿಲಗೊಂಡು ಸಂಪೂರ್ಣ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ.

- Advertisement -

ಯಡವನಾಡು ಗ್ರಾಮದ ದಮಯಂತಿ ಎಂಬವರ ಮನೆಯ ಗೋಡೆ ಹಾಗೂ ಮೇಲ್ಚಾವಣಿ ಕುಸಿದಿದ್ದು, ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಗ್ರಾಮದ ಪಿ.ಎಸ್.ಅಬ್ಬಾಸ್ ಹಾಗೂ ಗರಗಂದೂರು ಗ್ರಾಮದ ಸುಬೈದಾ ಎಂಬವರ ಮನೆಯ ಮೇಲ್ಛಾವಣಿಗೆ ಹಾನಿಗೊಳಗಾಗಿದೆ. ಕೂಗೆಕೋಡಿ ಗ್ರಾಮದ ಜಯಮ್ಮ ಎಂಬವರ ಮನೆಯು ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಕುಸಿದಿದ್ದು ಮನೆಯ ಒಂದು ಭಾಗ ಸಂಪೂರ್ಣ ಹಾಳಾಗಿದೆ.

ಕೊಡ್ಲಿಪೇಟೆ ಹೋಬಳಿಯ ಜಾನಕಮ್ಮ ಎಂಬವರ ಮನೆಯ ಮೇಲೆ ಮರ ಬಿದ್ದಿದ್ದು ಮನೆ ಜಖಂ ಗೊಂಡಿದೆ. ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡ್ಲಿ ಗ್ರಾಮದ ಅಪ್ಪಸ್ವಾಮಿ ಎಂಬವರ ಮನೆಯ ಗೋಡೆ ಮಳೆಯಿಂದ ಹಾನಿಯಾಗಿದೆ. ತಾಲೂಕಿನ ಶಿರಂಗಳ್ಳಿ ಗ್ರಾಮದ ಪುಪ್ಪಯ್ಯ ರವರ ಮನೆಯ ಮೇಲೆ ಮರ ಬಿದ್ದು ಅವರ ಮಗ ಧರ್ಮರಾಯ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಶಾಂತಳ್ಳಿ ಹೋಬಳ್ಳಿವ್ಯಾಪ್ತಿಯ ಕುಂದಳ್ಳಿ,ಪುಷ್ಪಗಿರಿ ವ್ಯಾಪ್ತಿಯಲ್ಲಿ ಅತಿಹೆಚ್ಚು ಮಳೆಯಾಗುತ್ತಿದ್ದು.ಗದ್ದೆಗಳು ಸಂಪೂರ್ಣ ಮುಳುಗಿ ಹೊಳೆಯಂತಾಗಿವೆ. ಗ್ರಾಮೀಣ ಭಾಗದ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಸಂಪರ್ಕ ಕಳೆದುಕೊಳ್ಳುತ್ತಿವೆ. ತಾಲೂಕಿನಾದ್ಯಂತ ಗಾಳಿಯೊಂದಿಗೆ ಬಿಟ್ಟು ಬಿಡದೇ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದು. ಕೆಲವು ಕಾಲೇಜುಗಳಿಗೆ ರಜೆ ನೀಡದೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಹರಸಾಹಸ ಪಡುವಂತಾಗಿದೆ.ಮರಗಳು ರಸ್ತೆಗೆ ಉರುಳುತ್ತಿದ್ದು ಕೆಲವೆಡೆ ಬಸ್ ಸಂಚಾರ ಕಡಿತಗೊಳ್ಳುತ್ತಿದೆ. ಇನ್ನೊಂದೆಡೆ ರಸ್ತೆಗೆ ಬಿದ್ದ ಮರಗಳನ್ನು ಗ್ರಾಮೀಣ ಭಾಗದ ಸ್ಥಳೀಯ ಜನರೇ ಮರ ತೆರವು ಗೊಳಿಸುತ್ತಿದ್ದು. ಬಸ್ ಗಳು ತಡವಾಗಿ ಬರುತ್ತಿವೆ.ಇದರಿಂದ ಗ್ರಾಮೀಣ ಭಾಗದಿಂದ ಆಗಮಿಸುವ ವಿದ್ಯಾರ್ಥಿಗಳು ತರಗತಿಗೆ ಗೈರಾಗುತ್ತಿದ್ದಾರೆ.

Join Whatsapp