SDPI ಕಾರ್ಯಕರ್ತನೋರ್ವನನ್ನು ಮಾರಕಾಯುಧಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಕೇರಳದ ಕಣ್ಣೂರಿನ ಚಿತ್ತಪ್ಪರಂಬ್ ಎಂಬಲ್ಲಿ ನಡೆದಿದೆ. ಈ ಕೃತ್ಯದ ಹಿಂದೆ ಸಂಘಪರಿವಾರದ ಕೈವಾಡವಿರುವ ಶಂಕೆಯನ್ನು ಪ್ರತ್ಯಕ್ಷದರ್ಶಿಗಳು ವ್ಯಕ್ತಪಡಿಸಿದ್ದಾರೆ. ಮೃತ ಯುವಕನನ್ನು ಕನ್ನವಂನ ಸಯ್ಯದ್ ಮುಹಮ್ಮದ್ ಸಲಾಹುದ್ದೀನ್ (30) ಎಂದು ಗುರುತಿಸಲಾಗಿದೆ.
ಸಲಾಹುದ್ದೀನ್ ಅವರು ತನ್ನ ಸಹೋದರಿಯರಿಬ್ಬರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಚಿತ್ತರಿಕ್ಕಡವ್ ಪ್ರದೇಶದ ಕೈಚೇರಿ ಎಂಬಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಹಿಂಬದಿಯಿಂದ ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಗುದ್ದಿದ್ದರು. ಅದನ್ನು ವಿಚಾರಿಸಲೆಂದು ಕಾರು ನಿಲ್ಲಿಸಿ ಹೊರಬಂದ ಸಲಾಹುದ್ದೀನ್ ರನ್ನು ದಾಳಿಕೋರರು ಮಾರಕಾಯುಧಗಳಿಂದ ಕಡಿದು ಹತ್ಯೆ ನಡೆಸಿದ್ದಾರೆ. ಸಲಾಹುದ್ದೀನ್ ಅವರು ಕೂತುಪ್ಪರಂಬದ ತನ್ನ ಮನೆಗೆ ವಾಪಸಾಗುತ್ತಿದ್ದರು.
ಸಲಾಹುದ್ದೀನ್ ಅವರನ್ನು ತಲಶೇರಿ ಜನರಲ್ ಆಸ್ಪತ್ರೆಗೆ ಸೇರಿಸಿದ್ದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಸಲಾಹುದ್ದೀನ್ ತನ್ನ ಪೋಷಕರು, ಇಬ್ಬರು ಸಹೋದರಿಯರು ಸೇರಿದಂತೆ, ಅಸ್ವಾ(4) ಮತ್ತು ಹಾದಿಯಾ (2) ಎಂಬ ತನ್ನಿಬ್ಬರು ಪುಟಾಣಿ ಮಕ್ಕಳನ್ನೂ ಅಗಲಿದ್ದಾರೆ.
‘ಇದು ಆರೆಸ್ಸೆಸ್ ನ ಕೃತ್ಯ’ : ಎಸ್ಡಿಪಿಐ ಆರೋಪ
ಘಟನೆಯ ಕುರಿತು ‘ಪ್ರಸ್ತುತ’ ತಂಡ ಎಸ್ಡಿಪಿಐ ಕಣ್ಣೂರು ಜಿಲ್ಲಾಧ್ಯಕ್ಷ ಜಲಾಲ್ ಎ ಸಿ ಅವರನ್ನು ಸಂಪರ್ಕಿಸಿದಾಗ, “ಸಲಾಹುದ್ದೀನ್ ಅವರನ್ನು ಕೊಲೆ ಮಾಡಿರುವ ಘಟನೆಯ ಹಿಂದೆ ಆರೆಸ್ಸೆಸ್ ಇರುವುದು ಸ್ಪಷ್ಟವಾಗಿದೆ. ಆರೆಸ್ಸೆಸ್ ಸಂಘಟನೆಯ ಜಿಲ್ಲಾ ನಾಯಕರ ಸಂಪೂರ್ಣ ಬೆಂಬಲದ ನೆರವಿನಿಂದ ವ್ಯವಸ್ಥಿತವಾಗಿ ಈ ಹತ್ಯೆಯನ್ನು ನಡೆಸಲಾಗಿದೆ” ಎಂದವರು ತಿಳಿಸಿದರು. ನಾವು ಇದನ್ನು ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದು, ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.