ಈಜಿಪ್ಟ್ ಮಾಜಿ ಅಧ್ಯಕ್ಷ ಮೊರ್ಸಿಯ ಮಗನ ಸಾವು ಹೃದಯಾಘಾತವಲ್ಲ!

Prasthutha News

ಈಜಿಪ್ಟ್ ಮಾಜಿ ಅಧ್ಯಕ್ಷ ಹಾಗೂ ಬ್ರದರ್ ಹುಡ್ ನಾಯಕರಾಗಿದ್ದ ಮೊಹಮ್ಮದ್ ಮೊರ್ಸಿಯವರ ಕಿರಿಯ ಮಗ ಅಬ್ದುಲ್ಲಾರವರ ಸಾವು ಹೃದಯಾಘಾತವಲ್ಲ, ಬದಲಿಗೆ ‘ಮಾರಕ ವಸ್ತು’ವಿನಿಂದ ಚುಚ್ಚಿ ನಡೆದಿರುವ  ಕೊಲೆ ಎಂದು ಲಂಡನ್ನಿನಲ್ಲಿನ ಮೊರ್ಸಿಯವರ ಕಾನೂನು ತಂಡ  ಹೇಳಿದೆ.  ಈಜಿಪ್ಟ್ ಸರಕಾರಿ ಮೂಲಗಳು ಈ ಹಿಂದೆ ಅಬ್ದುಲ್ಲಾರವರು ಹೃದಯಾಘಾತದಿಂದ ಮರಣ ಸಂಭವಿಸಿದೆ ಎಂದು ಹೇಳಿತ್ತು.

ಅಬ್ದುಲ್ಲಾ ಮೊರ್ಸಿ ಕಳೆದ ವರ್ಷ ಸೆಪ್ಟಂಬರ್ 4 ರಂದು ಕೈರೋದ ನೈರುತ್ಯ ಭಾಗದಲ್ಲಿರುವ ಗಿಝಾ ಎನ್ನುವ ಪ್ರದೇಶದಲ್ಲಿನ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದ್ದರು. ಅಬ್ದುಲ್ಲಾ ಮೊರ್ಸಿಯವರು ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತವಾಗಿದೆ. ನಂತರ ಅವರನ್ನು ಹತ್ತಿರದಲ್ಲಿದ್ದ ಗಿಝಾದ ಆಸ್ಪತ್ರೆಗೆ ಕೊಂಡು ಹೋಗಲಾಗಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮರಣ ಹೊಂದಿದರು ಎಂದು ಸರ್ಕಾರೀ ಮೂಲಗಳು ಆ ವೇಳೆ ಹೇಳಿದ್ದವು. ಹಲವು ಇತರೆ ಸುದ್ದಿ ಸಂಸ್ಥೆಗಳೂ ಕೂಡಾ ಇದಕ್ಕೆ ಧ್ವನಿಗೂಡಿಸಿ, ಅಬ್ದುಲ್ಲಾ ಮೊರ್ಸಿಯವರಿಗೆ ಈ ಹಿಂದೆ ಕೂಡಾ ಆರೋಗ್ಯ ಸಂಬಂಧಿ ಖಾಯಿಲೆಗಳು ಇದ್ದವು, ಮಾತ್ರವಲ್ಲ ತನ್ನ ತಂದೆ ಮೊಹಮ್ಮದ್ ಮೊರ್ಸಿಯ ನಿಧನದ ನಂತರ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ವರದಿ ಮಾಡಿದ್ದವು.

ಆದರೆ ಇದೀಗ ಲಂಡನಿನಲ್ಲಿರುವ ಗೆರ್ನಿಕಾ 37ನ ಅಂತರಾಷ್ಟ್ರೀಯ ನ್ಯಾಯ ಮಂಡಳಿಯಲ್ಲಿನ ಮೊರ್ಸಿಯವರ ಕಾನೂನು ತಂಡ, ಅಬ್ದುಲ್ಲಾ ಮೊರ್ಸಿಯ ಮರಣ ‘ಮಾರಕ ವಸ್ತು’ವಿನಿಂದಾಗಿರುವ ಹತ್ಯೆ ಎನ್ನಲು ನಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ, ಅದನ್ನು ನಾವು ಕಲೆ ಹಾಕಿದ್ದೇವೆ” ಎಂದಿದೆ. “ಅಬ್ದುಲ್ಲಾರಿಗೆ ಮಾರಕ ವಸ್ತುವೊಂದರಿಂದ ಚುಚ್ಚಿದ ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆ. ಆ  ನಂತರ 20 ಕಿ ಮೀ ದೂರದಲ್ಲಿರುವ ಆಸ್ಪತ್ರೆಗೆ ಅವರದೇ ಕಾರಿನಲ್ಲಿ ಸಾಗಿಸಲಾಗಿದೆ ಎಂದು ಈಗ ಬಹಿರಂಗಪಡಿಸಿರುವ ಮಾಹಿತಿಗಳು ದೃಢಪಡಿಸುತ್ತದೆ. ಮರಣ ಹೊಂದಿದ್ದು ದೃಢಪಟ್ಟ ನಂತರವೂ ಉದ್ದೇಶಪೂರ್ವಕವಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಿಲ್ಲ” ಎಂದು   ಲಂಡನ್ ಮೂಲದ ಈ ಕಾನೂನು ತಂಡ ತನ್ನ ಹೇಳಿಕೆಯಲ್ಲಿ ಆಪಾದಿಸಿದೆ.

ಈ ಕಾನೂನು ತಂಡದ ಮುಖ್ಯಸ್ಥನಾಗಿರುವ ಟಾಂ ಕ್ಯಾಡ್ಮನ್ ಪ್ರಕಾರ, ಅಬ್ದುಲ್ಲಾರ ಹತ್ಯೆಯ ಸಂದರ್ಭದಲ್ಲಿ ಬಹಳಷ್ಟು “ನಿಗೂಢತೆ” ಇದೆ. ಅಬ್ದುಲ್ಲಾ  ಅವರು ಬಹಿರಂಗವಾಗಿ ತನ್ನ ತಂದೆಯನ್ನು ‘ಹತ್ಯೆ’ ಮಾಡಲಾಗಿದೆಯೆಂದು ಕೆಲವು ಸರ್ಕಾರಿ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿ ಟ್ವೀಟ್ ಕೂಡಾ ಮಾಡಿದ್ದರು. ಆ ನಂತರ ಅವರು ಜಿವಭಯದಿಂದಲೇ ದಿನ ಕಳೆಯುತ್ತಿದ್ದರು. ಆ ನಂತರ ಈಜಿಪ್ಟ್ ಅಧಿಕಾರಿಗಳು ರಾಂಡಾ ಅಲಿ ಶೇಕರ್ ಅಲಿ ಅಸ್ರಾನ್ ಎನ್ನುವ 36 ವರ್ಷದ ಮಹಿಳೆಯನ್ನು ಅಬ್ದುಲ್ಲಾ ಮೊರ್ಸಿಯ ಸಾವಿಗೆ ಸಂಬಂಧಪಟ್ಟು ಪೂರ್ವನಿಯೋಜಿತ ಹತ್ಯೆಯ ಆರೋಪ ಹೊರಿಸಿ ಬಂಧಿಸಿತ್ತು. ಆದರೆ ಆಕೆಯ ವಿರುದ್ಧ ನಡೆಸಿದ್ದ ತನಿಖೆ ಪಾರದರ್ಶಕವಾಗಿರಲಿಲ್ಲ ಎಂದು ತಂಡ ಹೇಳಿಕೊಂಡಿದೆ. ಕ್ಯಾಡ್ಮನ್ ಸಮಿತಿಯು ‘ಅಬ್ದುಲ್ಲಾ ಮೊರ್ಸಿ ಹೃದಯಾಘಾತದಿಂದ ಸಾವನ್ನಪ್ಪಿದ್ದಲ್ಲ, ಬದಲಾಗಿ ಸೆಪ್ಟಂಬರ್ 4 ರಂದು ತನ್ನ ಮನೆಯ ಹೊರಗಡೆ ಕೊಲ್ಲಲ್ಪಟ್ಟಿದ್ದಾರೆ’ ಎಂಬ ಅಂತಿಮ ತೀರ್ಮಾನಕ್ಕೆ ಬಂದಿದೆ. ಈ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಅವರು ಈಜಿಪ್ಟ್ ಸರಕಾರವನ್ನು ಆಗ್ರಹಿಸಿದ್ದಾರೆ.

ಅಬ್ದುಲ್ಲಾ ಮೊರ್ಸಿಯವರ ಹತ್ಯೆಗೆ ಕಾರಣವಾಯಿತು ಎನ್ನಲಾದ ಟ್ವೀಟ್:


Prasthutha News

Leave a Reply

Your email address will not be published. Required fields are marked *