ದೇಶದಲ್ಲೇ ಅತ್ಯುತ್ತಮ ಆಡಳಿತವಿರುವ ರಾಜ್ಯಗಳಲ್ಲಿ ಕೇರಳಕ್ಕೆ ಪ್ರಥಮ ಸ್ಥಾನ : ಮುಖ್ಯಮಂತ್ರಿ ಪಿಣರಾಯಿ

Prasthutha|

ತಿರುವನಂತಪುರಂ : ಸಾರ್ವಜನಿಕ ವ್ಯವಹಾರಗಳ ಕೇಂದ್ರ (ಸಿಪಿಎ)ವು ದೇಶದ ಅತ್ಯುತ್ತಮ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ಮೊದಲ ಸ್ಥಾನವನ್ನು ಕೇರಳಕ್ಕೆ ನೀಡಿದೆ ಎಂದು ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

- Advertisement -


ಬಿಡುಗಡೆ ಮಾಡಿರುವ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ-2021 (ಪಿಎಐ) ಪ್ರಕಾರ, ಮೂಲಸೌಕರ್ಯ, ಆರೋಗ್ಯ, ಉದ್ಯೋಗ, ಪರಿಸರ ಸ್ನೇಹಿ ಮತ್ತು ಸರ್ವತೋಮುಖ ಅಭಿವೃದ್ಧಿ, ಶಿಕ್ಷಣದಂತಹ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ಕೇರಳ ಅತ್ಯುತ್ತಮ ಆಡಳಿತದ ರಾಜ್ಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದೆ.

ʻʻಇದು ಎಡಪಕ್ಷಗಳ ಸರಕಾರದೊಂದಿಗೆ ಕೈಜೋಡಿಸಿರುವ ಇಡೀ ಕೇರಳದ ಜನತೆಗೆ ಹೆಮ್ಮೆಯ ವಿಚಾರವಾಗಿದೆ. ಇದು ಇನ್ನಷ್ಟು ಎತ್ತರಕ್ಕೆ ಏರಲು ಪ್ರೇರಣೆಯಾಗಬೇಕುʼʼ ಎಂದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೇರಳದ ಅಭ್ಯುದಯ ಮತ್ತು ಪ್ರಗತಿಗೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ಪುನರುಚ್ಚರಿಸಿದ್ದಾರೆ.ಸಿಪಿಎ ಸೂಚ್ಯಂಕವು ಮೂರು ಮಾನದಂಡಗಳನ್ನು ಆಧರಿಸಿ ಸಮೀಕ್ಷೆಯನ್ನು ಕೈಗೊಳ್ಳಲಿದೆ. ಅವುಗಳೆಂದರೆ ಸಮಾನತೆ, ಬೆಳವಣಿಗೆ ಮತ್ತು ಸುಸ್ಥಿರತೆ ಎಂಬ ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತವೆ.

- Advertisement -


ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‌ ನಂತಹ ಐದು ಕೇಂದ್ರೀಕೃತ ಯೋಜನೆಗಳನ್ನು ಸಹ ಪರಿಶೀಲಿಸಲಾಯಿತು. ಕೋವಿಡ್ ತಡೆಗಟ್ಟುವಿಕೆಯಂತಹ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯವು ಎಷ್ಟರ ಮಟ್ಟಿಗೆ ಉತ್ಕೃಷ್ಟವಾಗಿದೆ ಎಂಬುದನ್ನು ಅಧ್ಯಯನವು ಪರಿಶೀಲಿಸಿದೆ.ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರಸ್ಥಾನದಲ್ಲಿದೆ. ಪಟ್ಟಿಯು 18 ರಾಜ್ಯಗಳನ್ನು ಒಳಗೊಂಡಿದೆ. ತಮಿಳುನಾಡು ಎರಡನೇ ಮತ್ತು ತೆಲಂಗಾಣ ಮೂರನೇ ಸ್ಥಾನದಲ್ಲಿದೆ. ಯೋಗಿ ಆದಿತ್ಯನಾಥ್ ಆಡಳಿತವಿರುವ ಉತ್ತರ ಪ್ರದೇಶ ತೀರಾ ಹಿಂದುಳಿದಿದೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.ಚಿಕ್ಕ ರಾಜ್ಯಗಳ ಪಟ್ಟಿಯಲ್ಲಿ ಸಿಕ್ಕಿಂ ಅಗ್ರಸ್ಥಾನದಲ್ಲಿದ್ದರೆ, ಮಣಿಪುರ ತೀರಾ ಹಿಂದುಳಿದಿದೆ. ಪುದುಚೇರಿ ಮೊದಲ ಕೇಂದ್ರಾಡಳಿತ ಪ್ರದೇಶವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೊನೆಯ ಸ್ಥಾನದಲ್ಲಿದೆ.

Join Whatsapp