ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ಎರಡನೇ ಟರ್ಮಿನಲ್ ಪ್ರಯಾಣಿಕರ ಬಳಕೆಗೆ ಸಿದ್ಧವಾಗುತ್ತಿದ್ದು, ನವೆಂಬರ್‌ನಲ್ಲಿ ಉದ್ಘಾಟನೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಹಾಗೂ ಕೇಂದ್ರ ಏಷ್ಯಾ ಪ್ರದೇಶದಲ್ಲಿನ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎನಿಸಿಕೊಂಡಿರುವ ನಿಲ್ದಾಣದಲ್ಲಿ ಸದ್ಯ ಒಂದೇ ಟರ್ಮಿನಲ್ ಇದೆ. ಆದರೆ, ನಿಲ್ದಾಣ ಬಳಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ಹೀಗಾಗಿ, ಪ್ರಯಾಣಿಕರ
ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಎರಡನೇ ಟರ್ಮಿನಲ್ ನಿರ್ಮಿಸಲಾಗಿದೆ.
ಎರಡನೇ ಟರ್ಮಿನಲ್ ಬಳಕೆಗೆ ಮುಕ್ತವಾದರೆ, ಇಡೀ ವಿಶ್ವದಲ್ಲೇ ಸುಸಜ್ಜಿತ ಟರ್ಮಿನಲ್ ಎನಿಸಿಕೊಳ್ಳಲಿದೆ. ಈ ಟರ್ಮಿನಲ್ ಉದ್ಘಾಟಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕೋರಲಾಗಿದ್ದು, ನವೆಂಬರ್ 10 ಅಥವಾ 11ರಂದು ಸಮಯ ನೀಡುವ ನಿರೀಕ್ಷೆ ಇದೆ’ ಎಂದು ಅಧಿಕಾರಿಗಳು ಹೇಳಿದರು.