ಆರಾಧನಾ ಸ್ಥಳಗಳ ಕಾಯ್ದೆಯನ್ನು ಸಂರಕ್ಷಿಸಲು ಅಸದುದ್ದೀನ್ ಉವೈಸಿ ಆಗ್ರಹ

Prasthutha|

ನವದೆಹಲಿ: 1991 ಆರಾಧನಾ ಸ್ಥಳಗಳ ಕಾಯ್ದೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಐಎಂಐಎಂನ ಅಸದುದ್ದೀನ್ ಉವೈಸಿ ಪತ್ರ ಬರೆದು ಒತ್ತಾಯಿಸಿದ್ದಾರೆ.

- Advertisement -

ಈ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸರಕಾರದ ಅಭಿಪ್ರಾಯ ತಿಳಿಸುವಂತೆ ಇತ್ತೀಚೆಗೆ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಉವೈಸಿ ಈ ಪತ್ರ ಬರೆದಿದ್ದಾರೆ.

ಆ ಕಾಯ್ದೆಯು ಆರಾಧನಾ ಸ್ಥಳಗಳ ಆಗಸ್ಟ್ 15, 1947ರ ಇರುವಿಕೆಯನ್ನು ಹಾಗೇ ಕಾಯ್ದುಕೊಳ್ಳುವಂತೆ ಹೇಳುತ್ತದೆ. ಸಂಸತ್ತಿನಲ್ಲಿ ಪಾಸಾದುದನ್ನು ಪ್ರತಿಪಾದಿಸುವುದು ಸರಕಾರದ ಕರ್ತವ್ಯ ಎಂದು ಹೈದರಾಬಾದ್ ಸಂಸದ, ಪ್ರಧಾನಿಗೆ ನೆನಪಿಸಿದ್ದಾರೆ.

- Advertisement -

ದೇಶದ ಬಹುತ್ವ ಮತ್ತು ವೈವಿಧ್ಯತೆಯನ್ನು ಕಾಪಾಡುವುದು ಅದರ ಉದ್ದೇಶವಾಗಿದೆ. ಧಾರ್ಮಿಕ ತಕರಾರುಗಳು ಸ್ವತಂತ್ರ ಭಾರತದ ಸಮಾಜವನ್ನು ಒಡೆಯದಿರಲಿ ಎನ್ನುವುದು ಅದರ ಮೂಲ ಆಶಯ. ಇದು ನಿಜವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಮೌಲ್ಯವನ್ನು ಪ್ರತಿಪಾದಿಸುತ್ತದೆ ಎಂದು ಅಸದುದ್ದೀನ್ ಹೇಳಿದ್ದಾರೆ.

“ಈ ಕಾಯ್ದೆ ಮಂಡನೆಯಾದಾಗ ಕೋಮು ಸೌಹಾರ್ದತೆಯ ನಡುವೆ ಆರಾಧನಾ ಸ್ಥಳಗಳ ವಿಷಯದಲ್ಲಿ ಕಲಹ ಉಂಟಾಗಬಾರದು ಎಂಬುದನ್ನು ಪರಿಗಣಿಸಲಾಗಿತ್ತು. ಈ ಕಾಯ್ದೆಯು ಇತಿಹಾಸದ ಇಂತಹ ಗಾಯಗಳು ಮಾಯುವಂತೆ ಮಾಡಿ ಸಮುದಾಯಗಳಲ್ಲಿ ಸೌಹಾರ್ದ ಮತ್ತು ಸದ್ಭಾವನೆ ನೆಲೆಸುವಂತೆ ಮಾಡುತ್ತದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬಾಬರಿ ಮಸೀದಿ ಧ್ವಂಸಗೊಳಿಸುವಲ್ಲಿ ಈ ಕಾಯ್ದೆ ಪಾಲನೆಯಾಗದಿರುವುದನ್ನು ಸರ್ವೋಚ್ಚ ನ್ಯಾಯಾಲಯ ಹೇಳಿರುವುದನ್ನು ಅಸದುದ್ದೀನ್ ನೆನಪಿಸಿದ್ದಾರೆ.

“ ಸಮುದಾಯಗಳ ನಡುವೆ ಅಗತ್ಯದ ಸೌಹಾರ್ದ ಮತ್ತು ಶಾಂತಿ ನೆಲೆಸಲಿ ಎಂಬ ಉದ್ದೇಶದಿಂದ ಈ ಕಾಯ್ದೆ ಜಾರಿಗೆ ತರಲಾಗಿದೆ. ಇದರ ಜಾರಿ ಕಡ್ಡಾಯ ಎನ್ನುವುದನ್ನು ಸುಪ್ರೀಂ ಕೋರ್ಟು ಎಲ್ಲರಿಗೂ ನೆನಪಿಸಬೇಕು. ಎಲ್ಲ ನಂಬಿಕೆಯವರೂ ಸಂವಿಧಾನದ ಆಶಯದಂತೆ ಅವರ ನಂಬಿಕೆ ಅಳವಡಿಸಿಕೊಳ್ಳಲು ಸ್ವತಂತ್ರರಿರುವುದು ನಮ್ಮ ಸಂವಿಧಾನದ ಪ್ರಮುಖ ಚೌಕಟ್ಟಾಗಿದೆ.” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಆದ್ದರಿಂದ ಪ್ರಧಾನಿಯವರು ಸುಪ್ರೀಂ ಕೋರ್ಟ್ ನಲ್ಲಿ ಸದರಿ ಕಾಯ್ದೆಯ ಆಶಯ ಎತ್ತಿ ಹಿಡಿದು ಪ್ರತಿಪಾದನೆ ಮಂಡಿಸಬೇಕು ಎಂದು ಅಸದುದ್ದಿನ್ ಆಗ್ರಹಿಸಿದ್ದಾರೆ.

ಸಂವಿಧಾನವು ಬಹುಮತ ಇರುವವರಿಂದ  ಅಲ್ಪಸಂಖ್ಯಾತರನ್ನು ರಕ್ಷಿಸುವ ಚೌಕಟ್ಟು ಪಡೆದಿದೆ. 1991ರ ಕಾಯ್ದೆಯು ಅದರ ಮುಂದುವರಿಕೆಯಾಗಿದೆ. ಪೂಜಾ ಸ್ಥಳಗಳ ಯಥಾಸ್ಥಿತಿ ರಕ್ಷಣೆ  ಸರಕಾರದ ಜವಾಬ್ದಾರಿ. “ಇದು ಈಗ ಅದರ ಪರೀಕ್ಷಾ ಕಾಲ. ಸಂವಿಧಾನದಂತೆ ಸಂಸತ್ತು ಪಾಸ್  ಮಾಡಿದ ವಿಶೇಷ ನಿಬಂಧನೆಯ1991 ಆರಾಧನಾ ಸ್ಥಳಗಳ ಕಾಯ್ದೆಯನ್ನು ಪ್ರತಿಪಾದಿಸುವುದು ಪ್ರಧಾನಿಯವರ ನೈತಿಕತೆಯಾಗಿದೆ” ಎಂದು ಅಸದುದ್ದೀನ್ ನೆನಪಿಸಿದ್ದಾರೆ.

“ಈ ಕಾಯ್ದೆಯು ಯಾರೂ ಚರಿತ್ರೆಯನ್ನು ತಿರುಚದಂತೆ ನಿರ್ಬಂಧಿಸುತ್ತದೆ. ಮಧ್ಯ ಕಾಲದ ವಿವಾದಗಳಿಗೆ ಈಗಿನ ಭಾರತವು ಯುದ್ಧಭೂಮಿ ಆಗಬಾರದು. ಅನಗತ್ಯವಾದ ವಿವಾದಗಳನ್ನು ಎಳೆದುತಂದು ಧಾರ್ಮಿಕ ವೈವಿಧ್ಯತೆಯನ್ನು ನಾಶ ಮಾಡುವುದು ನಿಲ್ಲಬೇಕು. ಆದ್ದರಿಂದ ಪ್ರಧಾನಿಯವರೇ ನೀವು ಸುಪ್ರೀಂ ಕೋರ್ಟಿನಲ್ಲಿ ಆ ಕಾಯ್ದೆಯ ಪರ ಗಟ್ಟಿ ಯಾಗಿ ನಿಲ್ಲಬೇಕು” ಎಂದು ಅಸದುದ್ದೀನ್ ಒತ್ತಿ ಹೇಳಿದ್ದಾರೆ.

Join Whatsapp