ಬೆಂಗಳೂರು: ನಟ ಯಶ್ ಅಭಿನಯದ ಕೆಜಿಎಫ್-2 ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರಿನ ಕ್ಯಾನ್ಸರ್ ರೋಗಿಗಳ ನೆರವು ಸಂಘ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಸರ್ಕಾರದ ಪರ ವಕೀಲ ವಿಜಯಕುಮಾರ್ ಪಾಟೀಲ್ ಅವರು ಕೆಜಿಎಫ್-2 ಚಿತ್ರದ ಬಿಡುಗಡೆಯನ್ನು ತಡೆಹಿಡಿಯಲು ಆದೇಶಿಸುವಂತೆ ಅರ್ಜಿದಾರ ಸಂಸ್ಥೆ ಅರ್ಜಿಯಲ್ಲಿ ಮನವಿ ಮಾಡಿತ್ತು. ಆದರೆ, ಕೆಜಿಎಫ್-2 ಕಳೆದ ಏಪ್ರಿಲ್ 14ರಂದು ಬಿಡುಗಡೆಯಾಗಿದೆ. ಇದರಿಂದ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ ಎಂದರು.
ಇದನ್ನು ಪರಿಗಣಿಸಿದ ಪೀಠವು ಈಗಾಗಲೇ ಕೆಜಿಎಫ್-2 ಚಿತ್ರದ ಬಿಡುಗಡೆಯಾಗಿದೆ. ಆದ್ದರಿಂದ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ ಎಂದು ಹೇಳಿ ಮನವಿ ವಜಾಗೊಳಿಸಿತು.
ಕೆಜಿಎಫ್-2 ಚಿತ್ರದಲ್ಲಿ ಧೂಮಪಾನವನ್ನು ವಿಜೃಂಭಿಸಲಾಗಿದೆ. ಅಲ್ಲದೆ, ಚಿತ್ರದಲ್ಲಿ ಯಾವುದೇ ರೀತಿ ಸಮಾಜದ ಕಳಕಳಿ ಇಲ್ಲ. ಚಿತ್ರ ಬಿಡುಗಡೆಯಾದರೆ ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಚಿತ್ರವನ್ನು ಬಿಡುಗಡೆ ಮಾಡುವುದನ್ನು ತಡೆಹಿಡಿಯಬೇಕು. ಚಿತ್ರಕ್ಕೆ ವಿತರಿಸಲಾಗಿರುವ ಯು/ಎ ಸೆನ್ಸಾರ್ ಪ್ರಮಾಣ ಪತ್ರವನ್ನು ಹಿಂಪಡೆಯುವಂತೆ ಕೇಂದ್ರ ಸೆನ್ಸಾರ್ ಮಂಡಳಿಗೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿದಾರ ಸಂಘವು 2022ರ ಮಾರ್ಚ್ 11ರಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿತ್ತು.
(ಕೃಪೆ: ಬಾರ್ ಆ್ಯಂಡ್ ಬೆಂಚ್)